ಎರಡನೇ ಹಂತದ ಅನ್ಲಾಕ್‌ ಬಗ್ಗೆ ನಾಳೆ ತೀರ್ಮಾನ ಎಂದ ಸಿಎಂ ಬಿಎಸ್‌ವೈ ಏನೆಲ್ಲ ಹೇಳಿದ್ರು..?

ಬೆಂಗಳೂರು: ನಾಳೆ ಎರಡನೇ ಹಂತದ ಅನ್ಲಾಕ್‌ ಬಗ್ಗೆ ತೀರ್ಮಾನ ಮಾಡುತ್ತೇವೆ, ಸಂಭವನೀಯ ಮೂರನೇ ಅಲೆಯ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದಕ್ಕೆಲ್ಲ ವಿನಾಯಿತಿ ಕೊಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಆದರೆ ಮುರನೇ ಅಲೆಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ತಜ್ಞರ ವರದಿ, ಸಂಭವನೀಯ ಮೂರನೇ ಅಲೆಯ ಗಮನದಲ್ಲಿಟ್ಟು ಯಾವುದಕ್ಕೆಲ್ಲ ವಿನಾಯಿತಿ ಕೊಡಬಹುದು ಎಂದು ನಾಳೆ ಎರಡನೇ ಹಂತದ ಅನ್ಲಾಕ್‌ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಶ್ವನಾಥ ಅವರ ಆರೋಪ ಆಧಾರ ರಹಿತವಾಗಿದೆ. ಅವರ ವಿರುದ್ದ ಶಿಸ್ತು ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾನು ಅವರ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ರಾಜಕೀಯದಲ್ಲಿ ಗೊಂದಲವೇ ಇಲ್ಲ, ಯಾರೋ ಒಂದಿಬ್ಬರ ಹೇಳಿಕೆಯಿಂದ ತಪ್ಪು ಗ್ರಹಿಕೆ ಆಗುತ್ತಿದೆ. ಯಾವುದೇ ಗೊಂದಲ ಇಲ್ಲ, ನಾವು ಅಭಿವೃದ್ಧಿ ಕಡೆ ಗಮನ ಕೊಟ್ಟಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾಳೆ ಮಹಾರಾಷ್ಟ್ರ ನೀರಾವರಿ ಸಚಿವರು ರಾಜ್ಯಕ್ಕೆ ಬರುತ್ತಿದ್ದಾರೆ. ಅವರ ಜೊತೆ ಪ್ರವಾಹ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರವಾಹದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ನಾಳೆ ವೀಡಿಯೋ ಕಾನ್ಪೆರೆನ್ಸ್ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಎಚ್​.ವಿಶ್ವನಾಥ್​​ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ವಯಸ್ಸಾಗಿದೆ. ವಯಸ್ಸಾದವರಿಂದ ಆಡಳಿತ ವೇಗವಾಗಿ ನಡೆಯಲ್ಲ ಎಂಬ ಹೇಳಿಕೆ ನೀಡಿದ್ದರು.ಮಕ್ಕಳಿಂದ ಮತ್ತೆ ಜೈಲಿಗೆ ಹೋಗ್ತಾರೆ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಸುಳ್ಳು ಆದಾಯ ಪ್ರಮಾಣಪತ್ರ ಪ್ರಕರಣ : ಸುಮಾ ಸಾಹುಕಾರಗೆ ಹೈಕೋರ್ಟ್ ತರಾಟೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement