ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಉನ್ನತ ನಾಯಕರೊಂದಿಗೆ ಮತ್ತು ಎರಡು ಪ್ರತ್ಯೇಕ ಮಂತ್ರಿಗಳ ಗುಂಪುಗಳೊಂದಿಗೆ ನಾಲ್ಕು ದಿನಗಳಲ್ಲಿ ಎರಡು ಸಭೆಗಳನ್ನು ನಡೆಸಿದ್ದು, ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಸೂಚನೆ ನೀಡಿದ್ದಾರೆ.
2019 ರ ಮೇ 30 ರಂದು ಪ್ರಾರಂಭವಾದ ಮೋದಿ ಸರ್ಕಾರದ ಎರಡನೇ ಇನ್ನಿಂಗ್ಸ್ನಲ್ಲಿ ಇದು ಮೊದಲ ಕ್ಯಾಬಿನೆಟ್ ಪುನರ್ರಚನೆಯಾಗಲಿದೆ.
ಲೋಕ ಜನಶಕ್ತಿ ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಮತ್ತು ಬಿಜೆಪಿಯ ಸುರೇಶ್ ಅಂಗಡಿ ಅವರ ನಿಧನದೊಂದಿಗೆ, ಕ್ಯಾಬಿನೆಟ್ ಸಚಿವರು ಮತ್ತು ರಾಜ್ಯ ಸಚಿವರೊಬ್ಬರ ಸ್ಥಾನ ಖಾಲಿ ಇದೆ. ಶಿರೋಮಣಿ ಅಕಾಲಿ ದಳ ಹಾಗೂ ಶಿವಸೇನೆ ಎರಡು ಪಕ್ಷಗಳು ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (ಎನ್ಡಿಎ)ದಿಂದ ನಿರ್ಗಮಿಸಿದ ನಂತರ ಎರಡು ಮಂತ್ರಿ ಸ್ಥಾನಗಳನ್ನೂ ಭರ್ತಿ ಮಾಡಬೇಕಾಗಿದೆ.
ಕ್ಯಾಬಿನೆಟ್ ಪುನರ್ರಚನೆ ಅಥವಾ ವಿಸ್ತರಣೆಯಿಲ್ಲದ ಕಾರಣ, ಅನೇಕ ಮಂತ್ರಿಗಳು ಹಲವಾರು ಖಾತೆಗಳನ್ನು ಹೊಂದಿದ್ದಾರೆ. ಉದಾಹರಣೆಗೆ, ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಆಹಾರ ಮತ್ತು ಗ್ರಾಹಕ ವ್ಯವಹಾರಗಳನ್ನು ಹೊಂದಿದ್ದಾರೆ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಗ್ರಾಮೀಣಾಭಿವೃದ್ಧಿಯನ್ನೂ ನಿರ್ವಹಿಸುತ್ತಾರೆ.
ಟೈಮ್ಸ್ ನೌ ಸುದ್ದಿವಾಹಿನಿ ಪ್ರಕಾರ, ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಹಾಗೂ ಚುನಾವಣೆ ಇರುವ ರಾಜ್ಯಗಳಿಗೆ ಸೇರಿದ ರಾಜಕಾರಣಿಗಳ ಪ್ರಾತಿನಿಧ್ಯ ಹೆಚ್ಚಾಗಬಹುದು ಎಂದು ಮೂಲಗಳು ಸೂಚಿಸುತ್ತವೆ.
ಸಂಬಂಧಿತ ಬೆಳವಣಿಗೆಯೊಂದರಲ್ಲಿ, ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಬಿಜೆಪಿಯ ಹಿರಿಯ ಮುಖಂಡರನ್ನು ಭೇಟಿ ಮಾಡಲು ನವದೆಹಲಿಗೆ ಆಗಮಿಸಿದ್ದಾರೆ ಎಂದು ಮೂಲಗಳು ಸೂಚಿಸುತ್ತವೆ. ಸೊನೊವಾಲ್ ಅವರು 2016 ರಿಂದ ಕಳೆದ ತಿಂಗಳವರೆಗೆ ಅಸ್ಸಾಂನ ಮುಖ್ಯಮಂತ್ರಿ ಆಗಿದ್ದರು. ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಗೆದ್ದಿದ್ದರೂ, ಸೋನೊವಾಲ್ ಅವರ ಬದಲಿಗೆ ಹಿಮಾಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ಮುಖ್ಯಮಂತ್ರಿ ಆಗಿದ್ದಾರೆ.
ಏತನ್ಮಧ್ಯೆ, ಹೊಸ ಸೇರ್ಪಡೆದಾರರಿಗೆ ಸಂಬಂಧಿಸಿದಂತೆ ಅನೇಕರು ಹೆಸರು ಕೇಳಿಬರುತ್ತಿವೆ. ಅವರಲ್ಲಿ ಪ್ರಮುಖವಾಗಿ ಕೆಲವು ಹೆಸರುಗಳು ಕೇಳಿಬರುತ್ತಿವೆ.
ಜ್ಯೋತಿರಾದಿತ್ಯ ಸಿಂಧ್ಯಾ: ಮಾಜಿ ಕೇಂದ್ರ ಸಚಿವ ಮತ್ತು ನಾಲ್ಕು ಬಾರಿ ಲೋಕಸಭಾ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಮಾರ್ಚ್ 2020 ರಲ್ಲಿ ಕಾಂಗ್ರೆಸ್ ತೊರೆದರು. ಅವರ ಪಕ್ಷಾಂತರವು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಯಿತು ಹಾಗೂ ಬಿಜೆಪಿ ಅಧಿಕಾರಕ್ಕೆ ಬಂತು ಎಂಬುದನ್ನು ನೆನಪಿಸಿಕೊಳ್ಳಬಹುದು.
ದಿನೇಶ್ ತ್ರಿವೇದಿ: ತೃಣಮೂಲ ಮಾಜಿ ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ದಿನೇಶ್ ತ್ರಿವೇದಿ ಮಾರ್ಚ್ನಲ್ಲಿ ಬಿಜೆಪಿಗೆ ಸೇರಿದರು. ತ್ರಿವೇದಿ ಫೆಬ್ರವರಿಯಲ್ಲಿ ರಾಜ್ಯಸಭೆ ಮತ್ತು ತೃಣಮೂಲ ಕಾಂಗ್ರೆಸಿಗೆ ರಾಜೀನಾಮೆ ನೀಡಿದ್ದರು.
ಭೂಪೇಂದರ್ ಯಾದವ್: ಭೂಪೇಂದರ್ ಯಾದವ್ ಅವರು ಭಾರತೀಯ ಜನತಾ ಪಕ್ಷದ ರಾಜ್ಯಸಭೆ ರಾಜಸ್ಥಾನದ ಸಂಸತ್ ಸದಸ್ಯರಾಗಿದ್ದಾರೆ.
ಅಶ್ವಿನಿ ಬೈಶ್ನಬ್ : ಮಾಜಿ ಒಡಿಶಾ-ಕೇಡರ್ ಐಎಎಸ್ ಅಧಿಕಾರಿ ಅಶ್ವಿನಿ ಬೈಶ್ನಬ್ ಅವರು 2019 ರ ಜೂನ್ನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
ವರುಣ್ ಗಾಂಧಿ: ಮನೇಕಾ ಗಾಂಧಿ ಮತ್ತು ದಿವಂಗತ ಸಂಜಯ್ ಗಾಂಧಿ ಅವರ ಪುತ್ರ ವರುಣ್ ಗಾಂಧಿ ಪಿಲಿಭಿತ್ನ ಭಾರತೀಯ ಜನತಾ ಪಕ್ಷದ ಸಂಸದರಾಗಿದ್ದಾರೆ.
ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್: ಲಡಾಖ್ ಸಂಸದ ಜಮಿಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರನ್ನು ಜುಲೈ 2020 ರಲ್ಲಿ ಬಿಜೆಪಿ ಸ್ಥಳೀಯ ಘಟಕದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಹಿಂದಿನ ರಾಜ್ಯ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕುರಿತು ಸಂಸತ್ತಿನಲ್ಲಿ ಭಾಷಣ ಮಾಡಿದಾಗ ನಮ್ಗ್ಯಾಲ್ ಅವರು 2019 ರಲ್ಲಿ ಬೆಳಕಿಗೆ ಬಂದರು.
ಮೋದಿ ಸರ್ಕಾರ 2019 ರ ಮೇ 30 ರಂದು ಪ್ರಮಾಣವಚನ ಸ್ವೀಕರಿಸಿತು. ಇದರಲ್ಲಿ 57 ಮಂತ್ರಿಗಳು (24 ಕ್ಯಾಬಿನೆಟ್ ಮಂತ್ರಿಗಳು, 9 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು 24 ರಾಜ್ಯ ಸಚಿವರು) ಇದ್ದಾರೆ. ಮೊದಲ ಮೋದಿ ಸರ್ಕಾರಕ್ಕಿಂತ 12 ಹೆಚ್ಚು.
ನಿಮ್ಮ ಕಾಮೆಂಟ್ ಬರೆಯಿರಿ