ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 2-3 ದಿನಗಳ ಕಾಲ ಅತ್ಯಧಿಕ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಲೆನಾಡಿನ ಹಲವೆಡೆ ಮರಗಳು ಧರೆಗುರುಳಿವೆ, ರಸ್ತೆ ಹಾಗೂ ಸೇತುವೆಗಳು ಜಲಾವೃತವಾಗಿವೆ. ಕೃಷಿ ಭೂಮಿಗಳು ಮಳೆ ನೀರಿನಿಂದ ತುಂಬಿ ಹೋಗಿವೆ. ಕಳೆದ ನಾಲ್ಕು ದಿನಗಳಿಂದ ಬಣಕಲ್, ಕೊಟ್ಟಿಗೆಹಾರ, ಬಾಳೂರು ಮತ್ತು ಚಾರ್ಮಾಡಿ ಘಾಟ್ ಸುತ್ತಮುತ್ತ 39.58 ಸೆಂ.ಮೀ. ದಾಖಲಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು (ಶನಿವಾರ) ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಮೆಲಾನಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೂಡ ಮಳೆ ಮುಂದುವರೆಯಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಗಾಳಿಯು ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈರುತ್ಯ ಮಾನ್ಸೂನ್ ಇಂದು ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ತೀವ್ರವಾಗಲಿದೆ. ಇಂದು ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಬೆಂಗಳೂರಿನಲ್ಲಿಯೂ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿಯೂ ಭಾರೀ ಮಳೆ ಮುಂದುವರೆದಿದೆ. ವಿಶೇಷವಾಗಿ ಮಡಿಕೇರಿ ಭಾಗದಲ್ಲಿ ಅಲ್ಲಲ್ಲಿ ಮರಗಳು ಧರೆಗುರುಳಿವೆ. ಭೂಕುಸಿತದ ಆತಂಕ ಎದುರಾಗಿದ್ದು, ಅಪಾಯದ ಪ್ರದೇಶಗಳಲ್ಲಿರುವ ಜನರು ಸುರಕ್ಷತಾ ಸ್ಥಳಗಳಿಗೆ ತೆರಳುತ್ತಿದ್ದಾರೆ. ಕೆಲವಡೆ ಗುಡ್ಡ ಕುಸಿತದ ವರದಿಯಾಗಿದೆ.
ಭಾರೀ ಮಳೆಗೆ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಅಪಾಯ ಮಟ್ಟದಲ್ಲಿದೆ. ಬಣಕಲ್ನಲ್ಲಿ ಬೃಹತ್ ಮರ ಉರುಳಿ ಬಿದ್ದಿದ್ದು, ಸುಮಾರು 7 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಯಿತು. ಬೆಳಗಾವಿಯಲ್ಲೂ ಮಳೆ ಸುರಿಯುತ್ತಿದ್ದು, ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಘಟಪ್ರಭಾ ಹಾಗೂ ಕೃಷ್ಣಾ ನದಿಗಳು ಪ್ರವಾಹ ಭೀತಿ ಸೃಷ್ಟಿಸಿವೆ.
ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ವರುಣನ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಳೆಯ ಅಬ್ಬರದಿಂದ ಚಿಕ್ಕೋಡಿ ವಿಭಾಗದ ಒಟ್ಟು 7 ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಬೆಳಗಾವಿ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಬೆಳಗಾವಿ ಜಿಲ್ಲೆ ಮಾರ್ಕಂಡೇಯ ನದಿಯಲ್ಲಿ ಓರ್ವ ರೈತ ಕೊಚ್ಚಿ ಹೋಗಿದ್ದಾನೆ. ಈತನಿಗಾಗಿ ಎಸ್ ಡಿ ಆರ್ ಎಫ್ ತಂಡ ಶೋಧ ಕಾರ್ಯ ನಡೆಸಿದೆ. ಬೆಳಗಾವಿ ಬಳಿಯ ನಾಲಾ ಉಕ್ಕಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಮುಳುಗಡೆಯಾಗಿದೆ. ಘಟಪ್ರಭಾ, ಮಲಪ್ರಭಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ.ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಘಟಪ್ರಬಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುಧೋಳ್, ಬನಹಟ್ಟಿ ತಾಲೂಕುಗಳು ಪ್ರವಾಹ ಭೀತಿ ಎದುರಿಸುತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ