ಧರ್ಮ-ವರ್ಗ-ರಾಷ್ಟ್ರೀಯತೆ ಗಡಿ ಮೀರಿ ವಿಶ್ವದಲ್ಲಿ ಜನಪ್ರಿಯವಾಗುತ್ತಿರುವ ಯೋಗ

(ದಿನಾಂಕ ಜೂನ್‌ ೨೧ ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಆ ನಿಮಿತ್ತ ಒಂದು ಅವಲೋಕನ)

ಭಾರತದ ಪ್ರಾಚೀನ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಿರುವ ಯೋಗವು ಆರೋಗ್ಯ ಮತ್ತು ಸಮಗ್ರ ಜೀವನದ ಪದ್ಧತಿಯಾಗಿದೆ. ಋಷಿಗಳು, ಮಹರ್ಷಿಗಳು, ಸಂತರು, ಯೋಗವನ್ನು ಪಾಲಿಸುತ್ತಾ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಯೋಗವು ಸಕಾರಾತ್ಮಕ ಆರೋಗ್ಯವನ್ನು ನೀಡುವ ಜೊತೆಗೆ, ಸಕಾರಾತ್ಮಕ ನಡವಳಿಕೆಯನ್ನೂ ಬೆಳೆಸುತ್ತದೆ.
ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸುಗಳ ಆರೋಗ್ಯದಲ್ಲಿ ಸಮತೋಲನ ಸಾಧಿಸಿಕೊಂಡು ಉತ್ತಮ ಜೀವನ ಸಾಗಿಸಬಹುದಾಗಿದೆ. ಅಂತೆಯೇ ಇಡೀ ವಿಶ್ವವೇ ಭಾರತದ ಈ ಯೋಗ ವಿಜ್ಞಾನವನ್ನು ಒಪ್ಪಿಕೊಂಡಿರುವ ಪರಿಣಾಮದಿಂದ ಪ್ರತಿವರ್ಷ ಜೂನ್ ೨೧ರಂದು ಅಂತರ್‌ರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ.
ಯೋಗವು ಅತಿಸೂಕ್ಷ್ಮ ವಿಜ್ಞಾನಧಾರಿತ ಒಂದು ಆಧ್ಯಾತ್ಮಿಕ ಶಾಸ್ತ್ರವಾಗಿದ್ದುಕೊಂಡು ಮನಸ್ಸು-ಜೀವ, ಮಾನವ ಹಾಗೂ ಪ್ರಕೃತಿಯ ನಡುವೆ ಸಾಮರಸ್ಯ ತರುವ ಉದ್ದೇಶ ಹೊಂದಿರುವ ಕಾರಣದಿಂದ ಇದೀಗ ಅದು ಎಲ್ಲ ಧರ್ಮ, ವರ್ಗ ಹಾಗೂ ರಾಷ್ಟ್ರೀಯತೆಯ ಗಡಿ ಮೀರಿ ಜನಪ್ರಿಯವಾಗುತ್ತಿದೆ. ವಿವಿಧ ಜೀವನ ಶೈಲಿಗಳಿಂದಾಗುವ ಅಸ್ವಸ್ಥತೆಗೆ ಪರಿಣಾಮಕಾಗಿ ಚಿಕಿತ್ಸೆ ನೀಡುವ ಸಾಮರ್ಥ್ಯದಿಂದಾಗಿ, ಪ್ರಪಂಚದಾದ್ಯಂತ ತನ್ನ ವಿಸ್ತರಣೆಯ ಜಾಲವನ್ನು ಹೊಂದಿದೆ. ಭಾರತ ದೇಶವು ಯೋಗಕ್ಕೆ ನೀಡುತ್ತಿರುವ ಕೊಡುಗೆಗಳನ್ನು ವಿಶ್ವದ ಹಲವಾರು ದೇಶಗಳು ಲವಲವಿಕೆಯಿಂದ ಅವಲೋಕಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.
ಈಗಿನ ಕಾಲ ತಾಂತ್ರಿಕತೆಯ ಬೆಳವಣಿಗೆಯಿಂದ ಕೂಡಿದ್ದು, ನಮ್ಮ ಜೀವನದಲ್ಲಿ ಕಲುಷಿತ ವಾತಾವರಣ, ನಮ್ಮ ಆಧುನಿಕ ಜೀವನ ಶೈಲಿ, ಕೊಳ್ಳು ಬಾಕುತನದ ಸಂಸ್ಕೃತಿ ನಮ್ಮ ದೈಹಿಕ, ಮಾನಸಿಕ, ಭಾವನಾತ್ಮಕ, ಭೌದ್ಧಿಕ, ಸಾಮಾಜಿಕ ಎಲ್ಲ ಆಯಾಮಗಳಲ್ಲಿ ಸಮಸ್ಯೆ ಹಾಗೂ ಗೊಂದಲಗಳನ್ನು ಸೃಷ್ಟಿಸಿ ಮನುಷ್ಯನಲ್ಲಿ ದೈಹಿಕ ಮತ್ತು ಅನಾರೋಗ್ಯಕ್ಕೆ ಕಾರಣವಾಗಿದೆ. ಆದರೆ, ಯೋಗವು ಜೀವನದ ಎಲ್ಲ ಹಂತಗಳಲ್ಲಿ ಿದರಿಂದ ಹೊರಬರಲು ಸರಿಯಾದ ಮಾರ್ಗ ತೋರಿಸುತ್ತ ಜಾಗತಿಕವಾಗಿ ಬೆಳೆಯುತ್ತಿದೆ.
ನಮ್ಮ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರು ೨೦೧೪ ರ ಸೆಪ್ಟೆಂಬರ್ ೨೭ ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತ, ನಮ್ಮ ಭವ್ಯ ಭಾರತದ ಪುರಾತನದ ಪರಂಪರೆಯಾದ ಇಡೀ ಜಗತ್ತಿಗೆ ಅಮೂಲ್ಯವಾದ ಯೋಗವನ್ನು ಕಾಣಿಕೆಯಾಗಿ ನೀಡಿದೆ ಎಂದು ಹೇಳಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಯೋಗವು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ, ಆಲೋಚನೆ ಮತ್ತು ಕ್ರೀಯೆ, ಸಂಯಮ ಮತ್ತು ಸಾರ್ಥಕತೆ, ಮನುಷ್ಯ ಮತ್ತು ಪ್ರಕೃತಿಯ ನಡುವೆ ಸುಮಧುರವಾದ ಸಂಬಂಧದ ಬಗ್ಗೆ ಸಮಗ್ರವಾದ ಧೋರಣೆಯನ್ನು ಹೊಂದುವುದರ ಬಗೆಯನ್ನು ತಿಳಿಸುತ್ತದೆ.
ಯೋಗವೆಂದರೆ, ಕೇವಲ ಶಾರೀರಿಕ ವ್ಯಾಯಾಮವಲ್ಲ, ಇದು ನಮ್ಮಲ್ಲಿ ನಮ್ಮತನವನ್ನು ವಿಶ್ವ ಮತ್ತು ಪ್ರಕೃತಿಯಲ್ಲಿ ಒಂದಾಗುವುದನ್ನು ಕಲಿಸಿ, ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ತರುವ ಮೂಲಕ ಸ್ವಯಂ ಪ್ರಜ್ಞೆಯನ್ನು ರೂಪಿಸುತ್ತದೆ. ಯೋಗದ ಈ ಮಹತ್ವವನ್ನು ಅರಿತ ವಿಶ್ವಸಂಸ್ಥೆಯು ಜೂನ್ ೨೧ ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಸಾರಿದ್ದು, ವಿಶ್ವದ ೧೭೫ಕ್ಕೂ ಹೆಚ್ಚಿನ ರಾಷ್ಟ್ರಗಳು ಬೆಂಬಲಿಸಿವೆ.
ಯೋಗಕ್ಕೆ ಸಂಬಂಧಿಸಿದ ಸಾಹಿತ್ಯ ನಮ್ಮ ದೇಶದ ಪುರಾತನ ಗ್ರಂಥಗಳಲ್ಲಿ ಕಂಡು ಬರುತ್ತದೆ. ಕ್ರಿಸ್ತ ಪೂರ್ವ ೪೦೦ ರಲ್ಲಿ ರಚಿಸಲಾದ ಪತಂಜಲಿಯ ಯೋಗ ಸೂತ್ರವು ಯೋಗಶಾಸ್ತ್ರದ ಮೊದಲ ಕ್ರಮಬದ್ಧ ಪಠ್ಯವಾಗಿದೆ. ಪತಂಜಲಿಯ ಯೋಗ ಸೂತ್ರವು ೮ ಸುತ್ತಿನ ಯೋಗದಿಂದ ಕೂಡಿದ್ದು ಅಷ್ಟಾಂಗ ಯೋಗ ಎಂದು ಜನಪ್ರಿಯವಾಗಿದೆ.
ಯೋಗ ಆರೋಗ್ಯಕರ ಜೀವನಕ್ರಮವಾಗಿದ್ದು, ಔಷಧ ರಹಿತ ಚಿಕಿತ್ಸೆಯಾಗಿದೆ. ಆರೋಗ್ಯ ಮತ್ತು ರೋಗಗಳ ಕುರಿತು ತನ್ನದೇ ಆದ ಪರಿಕಲ್ಪನೆ ಹೊಂದಿರುವ ಯೋಗವು ಜೀವನಕ್ಕೆ ಸಂಬಂಧಿಸಿದ ದೈಹಿಕ, ಮಾನಸಿಕ, ನೈತಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಆರೋಗ್ಯದ ಬಗ್ಗೆ ಸಮಗ್ರವಾದ ದೃಷ್ಟಿಕೋನ ಹೊಂದಲು ಸೂಚಿಸುತ್ತದೆ.
ಯೋಗವನ್ನು ಮಾಡುವುದರಿಂದ ಆರೋಗ್ಯ ಉತ್ತಮವಾಗುತ್ತದೆ. ದೇಹದಲ್ಲಿ ಯೋಗದಿಂದ ಪ್ರತಿ ನಿರೋಧಕ ಶಕ್ತಿ ಹೆಚ್ಚಾಗಿ, ಮನೋದೈಹಿಕ ಕಾಯಿಲೆಗಳನ್ನು ನಿಯಂತ್ರಿಸಬಹುದು. ಯೋಗ ಆಚರಣೆಯ ಸೂರ್ಯ ನಮಸ್ಕಾರ, ಆಸನಗಳು, ಪ್ರಾಣಾಯಾಮ, ವಿಶ್ರಾಂತಿಯ ತಂತ್ರಗಳು, ಬಂಧ ಮತ್ತು ಮುದ್ರ, ಧ್ಯಾನ ಮತ್ತು ಕ್ರಿಯೆಗಳನ್ನು ಒಳಗೊಂಡಿದೆ. ಸೂರ್‍ಯ ನಮಸ್ಕಾರವು ಬಹಳ ಉಪಯುಕ್ತವಾದ ಮತ್ತು ಜನಪ್ರಿಯವಾದ ಯೋಗ ವ್ಯಾಯಾಮ. ಇದು ದೇಹದ ವಿವಿಧ ಭಂಗಿಯ ಆಸನಗಳನ್ನು ಹೊಂದಿದ್ದು, ಇವುಗಳನ್ನು ಬೆಳಿಗ್ಗೆ ಸೂರ್‍ಯೋದಯದ ವೇಳೆ ಸೂರ್ಯನೆದುರಿಗೆ ಮಾಡಲಾಗುತ್ತದೆ. ಸೂರ್‍ಯ ನಮಸ್ಕಾರದಿಂದ ದೇಹದ ನರಮಂಡಲ ಮತ್ತು ಸ್ನಾಯು ಮಂಡಳಗಳಿಗೆ ಶಕ್ತಿ ನೀಡಿ ಉದ್ದೀಪನಗೊಳಿಸುತ್ತದೆ. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ, ರಕ್ತದಲ್ಲಿ ಆಮ್ಲಜನದ ಸರಬರಾಜ ಆಗಿ ದೇಹದ ಎಲ್ಲ ಭಾಗಗಳಲ್ಲಿ ಸಮತೋಲನವನ್ನು ತರುತ್ತದೆ. ಇದರಿಂದ ಮನೋದೈಹಿಕ ವ್ಯವಸ್ಥೆ ಚೈತನ್ಯಗೊಳ್ಳುತ್ತದೆಯಲ್ಲದೆ, ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ.
ಆಸನಗಳನ್ನು ವಿಶೇಷ ಭಂಗಿಗಳಿಂದ, ದೇಹವನ್ನು ಹಿಗ್ಗಿಸುವುದರಿಂದ ದೇಹ ಮತ್ತು ಮನಸ್ಸು ಸದೃಢಗೊಳಿಸುತ್ತದೆ. ಆಸನಗಳ ಮುಖ್ಯ ಉದ್ದೇಶ ದೇಹದ ಸ್ನಾಯುಗಳ ಆರೋಗ್ಯವನ್ನು ವೃದ್ಧಿಸುವುದು. ದೇಹದ ವಿವಿಧ ಭಂಗಿಗಳ ಆಸನಗಳ ಮೂಲ ಉದ್ದೇಶ. ಮನೋ-ನರದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದು. ಪ್ರಾಣಾಯಾಮ ಉಸಿರಾಟದ ವೇಗವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಸ್ವಯಂ ಚಾಲಿತ ನರಮಂಡಲದ ವ್ಯವಸ್ಥೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದೇ ಉಸಿರಾಟದ ಮುಖ್ಯ ಉದ್ದೇಶ.
ಧ್ಯಾನದ ಮುಖ್ಯ ಉದ್ದೇಶ ಅಂತರಿಕವಾಗಿ ಅರಿವು ಮೂಡಿಸುವುದು.
ಈ ಆಚರಣೆಯ ಮನಸ್ಸಿನ ಚಟುವಟಿಕಗಳನ್ನು ನಿಯಂತ್ರಿಸುವುದನ್ನು ಒಳಗೊಂಡಿದ್ದು, ಯಾವದೇ ರೀತಿಯ ಅಡೆ-ತಡೆಗಳಲ್ಲಿವೇ ಸತತವಾಗಿ ಯಾವ ಕಡೆ ಮನಸ್ಸು ಹರಿಯುತ್ತಿದ್ದರೂ ಅದನ್ನು ನಿಯಂತ್ರಿಸುವುದೇ ಧ್ಯಾನ. ಇದು ವ್ಯಕ್ತಿ ತನ್ನ ಮನಸ್ಸನ್ನು ಕೇಂದ್ರಿಕರಿಸುವುದರ ಮುಖಾಂತರ ಅನುಭವವನ್ನು ಪಡೆದುಕೊಳ್ಳುವ ಪ್ರಕ್ರಿಯೆಯಾಗಿದೆ. ನಿಯಮಿತವಾಗಿ ಹಾಗೂ ಸತತವಾಗಿ ಧ್ಯಾನ ಮಾಡುವುದರಿಂದ ವ್ಯಕ್ತಿ ಗಾಢವಾದ ಏಕಾಗ್ರತೆಯನ್ನು ಸಾಧಿಸಿ, ದೈಹಿಕ ಸಾಮರ್ಥ್ಯ, ಮಾನಸಿಕ ದಕ್ಷತೆ, ಕ್ರಿಯಾಶೀಲತೆ, ಸಮಾಧಾನ ಮತ್ತು ಒಳ ಅರಿವುಗಳ ಶಕ್ತಿಯನ್ನು ಹೆಚ್ದಿಸಕೊಳ್ಳಬಹುದು.
ಈಗ ಯೋಗವನ್ನು ವಿಶ್ವದಲ್ಲಿ ಸಂಪೂರ್ಣ ಉತ್ಸಾಹ ಮತ್ತು ಆಸಕ್ತಿಯಿಂದ ಪಾಲಿಸಲಾಗುತ್ತಿದೆ. ಅಲ್ಲದೆ ಯೋಗದ ಅಲ್ಪಾವಧಿ ಮತ್ತು ಧೀರ್ಘಾವಧಿ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ಯೋಗಕ್ಕೆ ಸಂಬಂಧಿಸಿದ ವಿಫುಲವಾದ ಸಾಹಿತ್ಯ ವಿಶ್ವ ಹಲವಾರು ಭಾಷೆಗಳಲ್ಲಿ ಬಂದಿದೆ. ಸಾಮಾಜಿಕ ಜಾಲಾತಾಣಗಳ ಮೂಲಕವು ಯೋಗವು ಹೆಚ್ಚು ಬಳಕೆಯಾಗುತ್ತಿದೆ ಮತ್ತು ಜನಪ್ರಿಯವಾಗುತ್ತಿದೆ.
ಸ್ವಾಮಿ ಶಿವಾನಂದ, ಟಿ. ಕೃಷ್ಣಾಮಾಚಾರ, ಸ್ವಾಮಿ ಕೈವಲ್ಯಾನಂದ, ಶ್ರೀ ಅರವಿಂದೋ, ಸದ್ಗುರು, ಮಹರ್ಷಿ ಮಹೇಶಯೋಗಿ, ರಾಘವೇಂದ್ರ ಸ್ವಾಮೀಜಿ, ಮಲ್ಲಾಡಹಳ್ಳಿ ರಾಘವೇಂದ್ರ ಸ್ವಾಮೀಜಿ, ಬಿ.ಕೆ.ಎಸ್. ಐಯ್ಯಂಗಾರ, ಬಾಬಾ ರಾಮದೇವ, ಶ್ವಾಸ ಗುರು ವಚನಾನಂದ ಸ್ವಾಮಿಜಿ ಮುಂತಾದವರು ಯೋಗಕ್ಕೆ ಹೊಸ ಸ್ವರೂಪ ನೀಡಿದ್ದಾರೆ, ನೀಡುತ್ತಿದ್ದಾರೆ. ಬದಲಾಗುತ್ತಿರುವ ಜೀವನ ಶೈಲಿ , ಯಾಂತ್ರಿಕ ಬದುಕಿಗೆ ಮತ್ತು ಕೋವಿಡ್ ಎದುರಿಸಲು ಯೋಗವು ರಾಮಬಾಣವಾಗಿದೆ. ಯೋಗ , ಪ್ರಾಣಾಯಾಮಾ, ಧ್ಯಾನ, ಜೀವನದ ಅವಿಭಾಜ್ಯ ಅಂಗವಾಗುತ್ತಿದೆ.
-ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

ಇಂದಿನ ಪ್ರಮುಖ ಸುದ್ದಿ :-   ಎನ್‌ಐಎ ದಾಳಿಯಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಐಸಿಸ್ ಭಯೋತ್ಪಾದಕ ದೆಹಲಿಯಲ್ಲಿ ಬಂಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement