ನೈಸ್ ಕಂಪನಿ ವಿರುದ್ಧ ಆರೋಪ; ಮಾಜಿ ಪ್ರಧಾನಿ ದೇವೇಗೌಡರಿಗೆ 2 ಕೋಟಿ ರೂ. ದಂಡ!

posted in: ರಾಜ್ಯ | 0

ಬೆಂಗಳೂರು:ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ (ನೈಸ್) ಲಿಮಿಟೆಡ್‌ಗೆ 2 ಕೋಟಿ ರೂ.ಗಳನ್ನು ಪಾವತಿಸುವಂತೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ನಿರ್ದೇಶನ ನೀಡಿದೆ.

ನೈಸ್ ಕಂಪನಿ (NICE) ವಿರುದ್ಧ  ಆರೋಪ ಮಾಡಿದ್ದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ತಮ್ಮ ಆರೋಪ ಸಾಬೀತುಪಡಿಸಲು ವಿಫಲರಾದ ಕಾರಣಕ್ಕೆ ನೈಸ್ ಕಂಪನಿಗೆ ದೇವೇಗೌಡ ಅವರು 2 ಕೋಟಿ ರೂ. ಪರಿಹಾರ ನೀಡಬೇಕೆಂದು ಕೋರ್ಟ್​ ಆದೇಶ ನೀಡಿದೆ.
10 ವರ್ಷಗಳ ಹಿಂದೆ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದ ದೇವೇಗೌಡರು ನಂದಿ ಇನ್​ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ಸಂಸ್ಥೆ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳೀಕೆ ನೀಡಿದ್ದರು. ಇದನ್ನು ವಿರೋಧಿಸಿ ದೇವೇಗೌಡರ ವಿರುದ್ಧ ನೈಸ್ ಕಂಪನಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ನೈಸ್ ಕಂಪನಿಯ ವಿರುದ್ಧ ಆರೋಪ ಸಾಬೀತುಪಡಿಸಲು ದೇವೇಗೌಡರಿಗೆ ಸಾಧ್ಯವಾಗದ ಕಾರಣ, ನೈಸ್​ ಕಂಪನಿಯ ಹೆಸರಿಗೆ ಧಕ್ಕೆ ತಂದಿರುವುದಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ಹೇಳಿದೆ.ಈ ಕುರಿತು ಡೆಕ್ಕನ್‌ ಹೆರಾಲ್ಡ್‌.ಕಾಮ್‌ ವರದಿ ಮಾಡಿದೆ.
2011ರಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ, ನೈಸ್ ಕಂಪನಿ ನಮ್ಮ ರಾಜ್ಯದ ಜನರ ಹಣವನ್ನು ಲೂಟಿ ಮಾಡುವ ಯೋಜನೆ ಕೈಗೆತ್ತಿಕೊಂಡಿದೆ ಎಂದು ನೈಸ್ ಯೋಜನೆಯ ವಿರುದ್ಧ ಆರೋಪ ಮಾಡಿದ್ದರು ಎಂದು ವರದಿ ಹೇಳಿದೆ.
ಸಂದರ್ಶನ ಪ್ರಸಾರವಾಗುತ್ತಿದ್ದಂತೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ನೈಸ್ ಕಂಪನಿ, ದೇವೇಗೌಡರು ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಯಿಂದ ನೈಸ್ ಕಂಪನಿಯ ಗೌರವಕ್ಕೆ ಧಕ್ಕೆಯಾಗಿದೆ. ಈ ನಿಟ್ಟಿನಲ್ಲಿ ದೇವೇಗೌಡರು ನಮ್ಮ ಕಂಪನಿಗೆ 10 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮಾನನಷ್ಟ ಮೊಕದ್ದಮೆ ಹೂಡಿತ್ತು.
ಸೋಮವಾರ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್, ನೈಸ್ ಕಂಪನಿಯ ವಿರುದ್ಧ ದೇವೇಗೌಡರು ಮಾಡಿದ ಆರೋಪಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ನೈಸ್ ಕಂಪನಿಯ ಗೌರವಕ್ಕೆ ಧಕ್ಕೆ ಆಗಿರುವುದಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ