ಮಹತ್ವದ ಸುದ್ದಿ… ಕರ್ನಾಟಕದಲ್ಲಿ ಶಾಲೆ ಆರಂಭಕ್ಕೆ ತಜ್ಞರ ಸಮಿತಿ ಏನು ಹೇಳಿದೆ..? ಇಲ್ಲಿದೆ ಮಾಹಿತಿ

ಬೆಂಗಳೂರು: ಕೋವಿಡ್‌ ಕಾರಣದಿಂದಾಗಿ ಕರ್ನಾಟಕದಲ್ಲಿ ಬಂದ್‌ ಆಗಿದ್ದ ಶಾಲೆಗಳ ಪುನರಾರಂಭ ಮಾಡುವ ಕುರಿತು ನಾರಾಯಣ ಹೃದಯಾಲಯದ ಡಾ.ದೇವಿಶಟ್ಟಿ ನೇತೃತ್ವದ ತಜ್ಞರ ಸಮಿತಿ ವರದಿ ಸಿದ್ಧಪಡಿಸಿದ್ದು, ಇಂದು (ಮಂಗಳವಾರ) ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಲ್ಲಿಸಲಿದೆ.
ತಜ್ಞರು ನೀಡುವ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಂದು (ಮಂಗಳವಾರ) ತಜ್ಞರ ಸಮಿತಿ ಸದಸ್ಯರು ಮತ್ತು ಹಿರಿಯ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಚರ್ಚೆಯ ಬಳಿಕ ಮುಂದಿನ ಕ್ರಮದ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವರದಿಯಲ್ಲಿ ಒಮ್ಮೆಲೇ ಶಾಲೆ ಆರಂಭಿಸುವುದು ಬೇಡ, ಹಂತಹಂತವಾಗಿ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಬಹುದು ಎಂದು ಸಲಹೆ ನೀಡಲಾಗಿದೆ. ಸಮ, ಬೆಸ ಮಾದರಿಯಲ್ಲಿ ತರಗತಿಗಳನ್ನು ಆರಂಭಿಸಿ ಎಂದು ಸಲಹೆ ನೀಡಲಾಗಿದ್ದು, ಮೊದಲ ಹಂತದಲ್ಲಿ ಕಾಲೇಜುಗಳನ್ನು ಆರಂಭಿಸುವುದು. ಎರಡನೇ ಹಂತದಲ್ಲಿ 7ರಿಂದ 10ನೇ ತರಗತಿ, ಮೂರನೇ ಹಂತದಲ್ಲಿ 5ರಿಂದ 7ನೇ ತರಗತಿ ಆರಂಭಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ ಎಂದು ತಿಳುದುಬಂದಿದೆ.
ಆದರೆ ಶಾಲೆಗಳ ಆರಂಭಕ್ಕೆ ಕೋವಿಡ್‌ ನಿಯಮ ಪಾಲನೆ ಕಡ್ಡಾಯ. ಮಾಸ್ಕ್ ಕಡ್ಡಾಯವಾಗಿದ್ದು, ಸರ್ಕಾರವೇ ಮಾಸ್ಕ್ ನೀಡಬೇಕು. ಶಾಲೆಗಳಲ್ಲಿ ದೈಹಿಕ ಅಂತರಕ್ಕೆ ಮೊದಲ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಒಬ್ಬರ ವಸ್ತುಗಳು ಒಬ್ಬರು ಮುಟ್ಟದಂತೆ ನಿಗಾವಹಿಸಬೇಕು. ದಿನದಲ್ಲಿ 2ರಿಂದ 3 ಗಂಟೆ ಮಾತ್ರ ತರಗತಿ ನಡೆಯಬೇಕು. 12ರಿಂದ 18 ವರ್ಷದ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ನೀಡುವುದಕ್ಕೆ ಅನುಮೋದನೆ ಕೊಡುವುದು ಉತ್ತಮ. ಈ ನಿಯಮ ಪಾಲಿಸದಿದ್ದರೆ ಮಕ್ಕಳಿಗೆ ಹೆಚ್ಚು ಅಪಾಯವಾಗುತ್ತದೆ ಎಂದು ಸಹ ತಜ್ಞರು ಎಚ್ಚರಿಸಿದ್ದಾರೆ.
ಎಂದು ಹೇಳಲಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶಿಕ್ಷಕರು, ಶಾಲೆಯ ಇತರೆ ಸಿಬ್ಬಂದಿಗೆ ಲಸಿಕೆ ಕಡ್ಡಾಯಗೊಳಿಸಬೇಕು. ಶಾಲಾ ಆವರಣಕ್ಕೆ ಬೇರೆಯವರಿಗೆ ಪ್ರವೇಶ ನಿರ್ಬಂಧಿಸಬೇಕು. ಆರೋಗ್ಯವಂತ ಮಕ್ಕಳು ಮಾತ್ರ ಶಾಲೆಗೆ ಬರಬೇಕು. ವಾರಕ್ಕೊಮ್ಮೆ ಸ್ಥಳೀಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಬೇಕು. ಮಕ್ಕಳಿಗೆ ಸರ್ಕಾರವೇ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಕೊರೊನಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ ಆವರಣ, ಸುತ್ತಮುತ್ತ ತಿನಿಸು ಮಾರಾಟ ನಿಷೇಧಿಸಬೇಕು. ಪೋಷಕರು ಸಮ್ಮತಿಸಿದರೆ ಮಾತ್ರ ಮಕ್ಕಳನ್ನು ಶಾಲೆಗೆ ಕರೆತರುವುದು. ಮಕ್ಕಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ ಎಂದು ತಜ್ಞರು ತಮ್ಮ ವರದಿಯಲ್ಲಿ ಸಲಹೆ ನೀಡಿದ್ದಾರೆ.
ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾದರಿಯ ಕಲಿಕೆಗೆ ಅವಕಾಶ ನೀಡಬಹುದು. ಮಕ್ಕಳಿಗೆ ಸರ್ಕಾರದಿಂದ ಪೌಷ್ಟಿಕಾಂಶ ಆಹಾರ ನೀಡಬೇಕು. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಟಗಳನ್ನು ಆಡಿಸಬೇಕು. ಊಟವನ್ನ ಸ್ಥಳೀಯ ಮಟ್ಟದಲ್ಲಿ ನೀಡಬೇಕೆಂದು ತಜ್ಞರು ತಿಳಿಸಿದ್ದಾರೆ.
ರಾಜ್ಯದಲ್ಲಿ 18 ವರ್ಷದೊಳಗಿನ 2.38 ಕೋಟಿ ಮಕ್ಕಳಿದ್ದಾರೆ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸೋಂಕು ಹರಡುತ್ತದೆ. 3.40 ಲಕ್ಷ ಮಕ್ಕಳಿಗೆ ಸೋಂಕು ಹರಡುತ್ತದೆ ಎಂದು ಅಂದಾಜಿಸಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. 6,801 ಐಸಿಯು, ಎಚ್​ಡಿಯು, ವೆಂಟಿಲೇಟರ್ ಬೆಡ್ 23,804 ಸಾಮಾನ್ಯ ಬೆಡ್‌ಗಳು ಬೇಕಾಗಬಹುದು. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ 43,000 ಬೆಡ್ ಅಗತ್ಯವಿದೆ ಎಂದು ತಿಳಿಸಿದ ಡಾ.ದೇವಿಪ್ರಸಾದ್ ಶೆಟ್ಟಿ ಮಧ್ಯಂತರ ವರದಿ ಕೊಟ್ಟಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಸರ್ಕಾರಕ್ಕೆ ಸಮಿತಿ ಮಾಡಿದು ಶಿಫಾರಸುಗಳು..

*ಮಕ್ಕಳಿಗೆ ಸೋಂಕು ಬಂದರೆ ಮನೆಯವರಿಂದಲೇ ಬರಬಹುದಾದ ಸಾಧ್ಯತೆಯೇ ಹೆಚ್ಚು.* ಮಕ್ಕಳು ಸೂಪರ್ ಸ್ಪ್ರೆಡರ್ಸ್ ಅಲ್ಲ,

*ಎರಡನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಿದರೂ ಹಾನಿ ಮಾಡಿದ್ದು ಕಡಿಮೆ, ಸಾವಿನ ಪ್ರಮಾಣ ಕೂಡ ಕಡಿಮೆ ಇದೆ, ಆದರೂ ಮುಂಜಾಗ್ರತೆ ದೃಷ್ಟಿಯಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲೇಬೇಕು.

* ಮಕ್ಕಳ ಕೋವಿಡ್ ಕೇರ್ ಕೇಂದ್ರ ಆರಂಭ ಮಾಡಬೇಕು, ಹೋಬಳಿ ಮಟ್ಟದಲ್ಲೇ ಆಸ್ಪತ್ರೆಗಳನ್ನ ಸಿದ್ಧತೆಯಲ್ಲಿಡಬೇಕು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಮಕ್ಕಳನ್ನ‌ ನೋಡಿಕೊಳ್ಳಲು ಪೋಷಕರೂ ಜೊತೆಯಲ್ಲಿ ಇರುವ ವ್ಯವಸ್ಥೆ ಇರಬೇಕು.

*ರಾಜ್ಯದಲ್ಲಿ 0-18 ವರ್ಷದೊಳಗಿನ 2.38% ಜನಸಂಖ್ಯೆ ‌ಇದೆ.ಮೂರನೇ ಅಲೆಯಲ್ಲಿ ಇದರಲ್ಲಿ ಶೇ. 1 ರಷ್ಟು ಮಕ್ಕಳಿಗೆ ಸೋಂಕು ತಗುಲುವ ಸಾಧ್ಯತೆಯಿದೆ.ಸೋಂಕಿನ ಹರಡುವಿಕೆ ತೀವ್ರ ಸ್ವರೂಪಕ್ಕೆ ಬಂದರೆ ದ್ದರೆ 3 ಲಕ್ಷ ಮಕ್ಕಳಿಗೆ ಸೋಂಕು ತಗುಲಬಹುದು. ಸೋಂಕು ಅಷ್ಟೊಂದು ತೀವ್ರವಾಗಿ ಹರಡದಿದ್ದರೆ 1.50 ಲಕ್ಷ ಮಕ್ಕಳಿಗೆ ಸೋಂಕು ತಗುಲಬಹುದು. ಸೋಂಕಿನ ಕನಿಷ್ಠ ಹರಡುವಿಕೆ ಇದ್ದರೆ 50 ಸಾವಿರದಿಂದ 1 ಲಕ್ಷ ಕೇಸ್ ಆಗಬಹುದು.

* ರಾಜ್ಯದಲ್ಲಿ ನೋಂದಣಿ‌ ಮಾಡಿಕೊಂಡಿರುವ 3000 ಮಕ್ಕಳ ವೈದ್ಯರು ಮಾತ್ರ ಇದ್ದಾರೆ.ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ತಜ್ಞರ ಕೊರತೆ ಇದೆ. ಅನುಪಾತದಲ್ಲಿ 6000 ಮಕ್ಕಳಿಗೆ ಒಬ್ಬ ಮಕ್ಕಳ ವೈದ್ಯರಿದ್ದಾರೆ. 1000 ಮಕ್ಕಳಿಗೆ ಒಬ್ಬರು ಮಕ್ಕಳ ವೈದ್ಯರು ಇರುವಂತೆ ನೋಡಿಕೊಳ್ಳಬೇಕು.

*ಹೀಗಾಗಿ ಮಕ್ಕಳಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ತರಬೇತಿ ಆರಂಭಿಸಬೇಕಿದೆ. ಕೊರತೆ ನೀಗಿಸಲು 7ರಿಂದ 15 ದಿನಗಳ‌ ಕೋರ್ಸ್ ಆರಂಭಿಸಿ ಇತರ ವೈದ್ಯರನ್ನ ಚಿಕಿತ್ಸೆ ನೀಡಲು ತಯಾರು ಮಾಡಬೇಕು.

* ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಬೆಡ್ ಗಳನ್ನ ಐಸಿಯು ಬೆಡ್‌ಗಳನ್ನಾಗಿ ಮಾಡಬೇಕು. ರಾಜ್ಯದಲ್ಲಿ ಸುಮಾರು 5000 ಮಕ್ಕಳ ಐಸಿಯು ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

*ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಲು ಮನೆ ಮನೆಗೆ ಕೆನೆ ಭರಿತ ಹಾಲು ನೀಡಬೇಕು.

*ಮಕ್ಕಳಿಗೆ ಸೋಂಕು ತಗುಲುವುದು ಮನೆಯ ಸದಸ್ಯರಿಂದಲೇ. ಹೀಗಾಗಿ ಮನೆಯ ಹಿರಿಯರಿಗೆ ವ್ಯಾಕ್ಸಿನ್ ಹಾಕಿಸಬೇಕು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement