ಮುಂದಿನ ಸಿಎಂ ಸಿದ್ದರಾಮಯ್ಯನವರೇ ಆಗಲಿ; ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ಧಿಕ್ಕರಿಸಿ ಮತ್ತಿಬ್ಬರು ಶಾಸಕರ ಹೇಳಿಕೆ

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದರೂ ಈಗ ಮತ್ತಿಬ್ಬರು ಶಾಸಕರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮುಂದಿನ ಮುಖ್ಯಮಂತ್ರಿಯನ್ನಾಗಿ ಸಿದ್ದರಾಮಯ್ಯ ಅವರನ್ನೇ ಮಾಡಬೇಕು ಎಂದು ಬೆಂಗಳೂರು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಹರಿಹರ ಶಾಸಕ ರಾಮಪ್ಪ ಬಹಿರಂಗ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಮಪ್ಪ ಅವರು, ಈ ಹಿಂದೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಮುಂದಿನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಅಖಂಡ ಶ್ರೀನಿವಾಸ ಮೂರ್ತಿ ಅವರು ಸಿದ್ದರಾಮಯ್ಯನವರೇ ನಮ್ಮ ನಾಯಕರು ಎಂದು ಹೇಳಿಕೆ ನೀಡಿದ್ದಾರೆ.
ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದರೂ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದವರಿಂದ ಪಕ್ಷ ಮುನ್ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು, ಸಿದ್ದರಾಮಯ್ಯ ಅವರನ್ನೇ ಮುಂದಿನ ಮುಖ್ಯಮಂತ್ರಿಯನ್ನಾಗಿ ನೋಡಲು ನಾನು ಇಚ್ಛಿಸುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಜಮೀರ್ ಅಹಮದ್ ಸಿದ್ದರಾಮಯ್ಯ ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಸಂಬೋಧಿಸಿದ್ದರು.. ಅವರ ಈ ಹೇಳಿಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕೆರಳಿಸಿತ್ತು. ಹೀಗಾಗಿ ದೆಹಲಿಗೆ ತೆರಳಿ ಮುಖ್ಯಮಂತ್ರಿ ಸ್ಥಾನ ಕುರಿತಂತೆ ಬಹಿರಂಗ ಹೇಳಿಕೆ ನೀಡುತ್ತಿರುವವರಿಗೆ ಕಡಿವಾಣ ಹಾಕಿ ಎಂದು ಹೈಕಮಾಂಡ್‍ಗೆ ಮನವಿ ಮಾಡಿಕೊಂಡಿದ್ದರು.
ಶಿವಕುಮಾರ್ ಮನವಿ ಮೇರೆಗೆ ರಾಜ್ಯ ಉಸ್ತುವಾರಿ ರಂಜಿತ್ ಸುರ್ಜೇವಾಲಾ ಅವರು ಶಾಸಕರು ಹಾಗೂ ಮುಖಂಡರಿಗೆ ಮುಂದಿನ ಮುಖ್ಯಮಂತ್ರಿ ಸ್ಥಾನ ಕುರಿತಂತೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಖಡಕ್‌ ಸೂಚನೆ ನೀಡಿದ್ದರು. ಆದರೆ ಸೂಚನೆಯನ್ನೇ ಧಿಕ್ಕರಿಸಿ ಮತ್ತಿಬ್ಬರು ಶಾಸಕರು ಹೇಳಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement