ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‍ ವಿತರಣೆ

posted in: ರಾಜ್ಯ | 0

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳ ಕಲಿಕೆ ನಿರಾತಂಕವಾಗಿ ಮುಂದುವರೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಡಿಜಿಟಲ್ ಲರ್ನಿಂಗ್ ಯೋಜನೆ ಅನುಷ್ಠಾನಗೊಳಿಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಹೇಳಿದ್ದಾರೆ. ಅಲ್ಲದೆ ಈ ವರ್ಷವೂ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿಂದು ಉನ್ನತ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದ ಸಮಗ್ರ ಚಿತ್ರಣವನ್ನು ಬದಲಿಸಲಿರುವ ಡಿಜಿಟಲ್ ಕಲಿಕಾ ಯೋಜನೆಯನ್ನು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ವರ್ಷದಿಂದ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು,
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿರ್ಲಕ್ಷಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗದಂತೆ ಈ ಕಾರ್ಯಕ್ರಮ ನೆರವಾಗಲಿದೆ. ಡಿಜಿಟಲ್ ಕಲಿಕೆಯ ಮೂಲಕ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ೨೧ನೇ ಶತಮಾನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜುಗೊಳಿಸಲಾಗುತ್ತದೆ. ೨೦೨೦-೨೦೨೧ನೇ ಸಾಲಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಟ್ಯಾಬ್ಲೆಟ್ ಪಿಸಿ ನೀಡಲಿದೆ ಎಂದು ಹೇಳಿದರು.
ಸರ್ಕಾರಿ ಕಾಲೇಜುಗಳಲ್ಲಿ ೨,೫೦೦ ತರಗತಿಗಳನ್ನು ಸ್ಮಾರ್ಟ್ ತರಗತಿಯಾಗಿ ಉನ್ನತೀಕರಿಸಲಾಗಿದೆ. ಈ ಸಾಲಿನಲ್ಲಿ ೬,೫೦೦ ಸ್ಮಾರ್ಟ್ ತರಗತಿಗಳನ್ನು ರೂಪಿಸಲಾಗುತ್ತದೆ.ಈ ಕೊಠಡಿಗಳಲ್ಲಿ ಪ್ರೊಜೆಕ್ಟರ್, ವೈಟ್‌ಬೋರ್ಡ್, ಆಂಡ್ರಾಯ್ಡ್ ಬಾಕ್ಸ್, ಯುಪಿಎಸ್ ಮತ್ತು ಇಂಟರ್‌ನೆಟ್ ಸೌಲಭ್ಯವಿದ್ದು, ಆಧುನಿಕ ಬೋಧನೆ, ಕಲಿಕೆಗೆ ಪೂರಕವಾಗಲಿದೆ. ೧೩೩ ಕೋಟಿ ರೂ. ವೆಚ್ಚದಲ್ಲಿ ೧.೫ ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಒದಗಿಸಲಾಗುತ್ತದೆ. ಹಾಗೆಯೇ ೨೭.೭೭ ಕೋಟಿ ವೆಚ್ಚದಲ್ಲಿ ೨,೫೦೦ ಸ್ಮಾರ್ಟ್ ತರಗತಿಗಳನ್ನು ರೂಪಿಸಲಾಗಿದೆ ಎಂದರು.ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಲವು ಗಣ್ಯರಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ