ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ 82 ವಾರ್ಡಗಳಲ್ಲೂ ಸ್ಪರ್ಧೆ: ಆಪ್‌ ಘೋಷಣೆ..!

posted in: ರಾಜ್ಯ | 0

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಯಾವ ಸಂದರ್ಭದಲ್ಲಿ ನಡೆದರೂ ಆಮ್ ಆದ್ಮಿ ಪಕ್ಷ ಸಿದ್ಧವಿದೆ.ಈ ಸಲದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕೆಲಸವನ್ನು ಅರವಿಂದ ಕೇಜ್ರಿವಾಲ್ ನಿರ್ದೇಶನದ ಮೇರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿನಗರದಲ್ಲಿ ಜನರು ಸಾಂಪ್ರದಾಯಿಕ ಪಕ್ಷಗಳ ಅಧಿಕಾರ ನೋಡಿ ಬೇಸತ್ತು ಹೋಗಿದ್ದು, ಪರ್ಯಾಯ ಪ್ರಬಲ ಪಕ್ಷಕ್ಕಾಗಿ ಕಾಯುತ್ತಿದ್ದಾರೆ. ಆ ಸ್ಥಾನವನ್ನು ಆಪ್ ಪಕ್ಷ ತುಂಬಲಿದ್ದು, ಈಗಾಗಲೇ 82 ವಾರ್ಡ್‌ಗಳಲ್ಲೂ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಇತರ ಪಕ್ಷಗಳಂತೆ ನಾವು ಬ್ಯಾಂಕ್ ಬ್ಯಾಲೆನ್ಸ್ ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ಪಕ್ಷದಿಂದ ಉತ್ತಮ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸುತ್ತೇವೆ. ನಗರವನ್ನು ವಿಶ್ವದರ್ಜೆಯ ಮಹಾನಗರ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ರಾಜ್ಯ ಪ್ರಭಾರಿ ರೋಮಿ ಬಾಟಿ ಮಾತನಾಡಿ, ಆಪ್ ಈಗಾಗಲೇ ದೆಹಲಿಯಲ್ಲಿ ಸುವ್ಯವಸ್ಥಿತ ಆಡಳಿತ ನೀಡಿ ಜನರ ಮನಸ್ಸು ಗೆದ್ದಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ದೆಹಲಿ ಮಾದಿರಯಲ್ಲಿಯೇ ಆಡಳಿತ ನೀಡಲು ಸಿದ್ಧಗೊಂಡಿದ್ದು, ಇದನ್ನು ಬರುವ ಪಾಲಿಕೆ ಚುನಾವಣೆ ಮೂಲಕ ನನಸು ಮಾಡಲು ಪ್ರಯತ್ನಿಸಲಾಗುವುದು ಎಂದರು.
ಹುಬ್ಬಳ್ಳಿ -ಧಾರವಾಡ ಮಹಾನಗರಪಾಲಿಕೆ ಕೇವಲ ಹು-ಧಾ ವಿಭಾಗದ ಆಮ್ ಆದ್ಮಿ ಪಕ್ಷದ ಚುನಾವಣೆಯಲ್ಲ, ಕೇವಲ ಕರ್ನಾಟಕ ರಾಜ್ಯಕ್ಕೆ ಪ್ರತಿಷ್ಠಿತ ಚುನಾವಣೆಯಲ್ಲ. ಇದು ಆಮ್ ಆದ್ಮಿ ಪಕ್ಷ ರಾಷ್ಟ್ರದಲ್ಲೇ ಅತ್ಯಂತ ಮುತುವರ್ಜಿಯಿಂದ ಸ್ಪರ್ಧಿಸುತ್ತಿರುವ ಚುನಾವಣೆ ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಮುಂಬರುವ ಪಾಲಿಕೆ ಚುನಾವಣೆಗೆ ಈಗಾಗಲೇ ಆನ್ಲೈನ್ ಮೂಲಕ 200ಕ್ಕೂ ಹೆಚ್ಚು ಅರ್ಜಿ ಬಂದಿದ್ದು, ನೇರವಾಗಿ ವಾರ್ಡ್ ವೀಕ್ಷಕರ ಮೂಲಕ ಪ್ರತಿ ವಾರ್ಡ್ ನಲ್ಲಿ 5ರಿಂದ 10 ಅಭ್ಯರ್ಥಿಗಳು ಸಿದ್ಧಗೊಂಡಿದ್ದಾರೆ. ಹೀಗಾಗಿ ರಾಜ್ಯ ನಾಯಕರು ಈ ಪಟ್ಟಿಯನ್ನು ಪರಿಶೀಲನೆ ನಡೆಸಿ 82 ವಾರ್ಡ್ ಗಳಿಗೆ ಅತ್ಯುತ್ತಮ ಅಭ್ಯರ್ಥಿಗಳನ್ನು ತೀರ್ಮಾನ ಮಾಡಲಿದ್ದಾರೆ. ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದ್ದು, ಆಮ್ ಆದ್ಮಿ ಪಕ್ಷಕ್ಕೆ ಈ ಚುನಾವಣೆ ಐತಿಹಾಸಿಕ ಚುನಾವಣೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ, ದರ್ಶನ ಜೈನ್, ಬಸವರಾಜ ಮುದಿಗೌಡರ. ಜಂಟಿ ಕಾರ್ಯದರ್ಶಿ ಶಾಮ್‌ ನರಗುಂದ ಇತರರಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ