ರಘುಪತಿ ಯಾಜಿ
ಹುಬ್ಬಳ್ಳಿ: ಕರ್ನಾಟಕದಲ್ಲಿ ರಾಜಕೀಯ ತಲ್ಲಣಕ್ಕೆ ಕಾರಣವಾದ ಹೈಕಮಾಂಡ್ ಹೇಳಿದ ತಕ್ಷಣವೇ ರಾಜೀನಾಮೆ ನೀಡುವೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಹಲವಾರು ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಯಡಿಯೂರಪ್ಪ ಹೇಳಿಕೆಯಿಂದ ಉದ್ಭವಿಸಿದ ಬಿಕ್ಕಟ್ಟು ತಿಳಿಗೊಳಿಸಲು ಯತ್ನಿಸಿದರು. ಇದರ ಬೆನ್ನಲ್ಲೇ ಕರ್ನಾಟಕಕ್ಕೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಬೆಂಗಳೂರಿನಲ್ಲಿ ಶಾಸಕರು ಮತ್ತು ಸಚಿವರೊಂದಿಗೆ ಸರಣಿ ಸಭೆ ನಡೆಸಿದರು.
ದೆಹಲಿಗೆ ಮರಳಿದ ಒಂದು ದಿನದ ನಂತರ ಸಿಂಗ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ತಮ್ಮ ಭೇಟಿಯ ಅವಲೋಕನಗಳ ಬಗ್ಗೆ ಮಾಹಿತಿಯನ್ನೂ ನೀಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ಬದಲಾಯಿಸುವ ಕುರಿತು ಕೆಲವೇ ಶಾಸಕರು ಹಾಗೂ ನಾಯಕರ ಹೇಳಿಕೆಗಳ ಹೊರತಾಗಿ ಉಳಿದವರಿಂದ ಇಂಥ ಯಾವುದೇ ಹೇಳಿಕೆಗಳು ವ್ಯಕ್ತವಾಗಿಲ್ಲ ಎಂಬ ಅಭಿಪ್ರಾಯದ ಜೊತೆಗೆ ಮತ್ತೊಂದು ಮಹತ್ವಪೂರ್ಣ ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಸಾಕಷ್ಟು ಅಪಸ್ವರಗಳಿವೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಕರ್ನಾಟಕ ಸರ್ಕಾರದಲ್ಲಿ ಅವರ ಅತಿಯಾದ ಹಸ್ತಕ್ಷೇಪ ಅಷ್ಟೇ ಅಲ್ಲ, ಹಿರಿಯ ಅಧಿಕಾರಿಗಳೊಂದಿಗೂ ನೇರವಾಗಿ ಸಂವಾದ ನಡೆಸುವ ಮೂಲಕ ತಮ್ಮ ಸಚಿವಾಲಯಗಳಲ್ಲಿ ಹಸ್ತಕ್ಷೇಪ ಮಾಡುತ್ತರುವ ಬಗ್ಗೆ ಹಲವಾರು ಮಂತ್ರಿಗಳು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮೊದಲು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಸಚಿವ ಈಶ್ವರಪ್ಪ ಅವರು. ತಮ್ಮ ಇಲಾಖೆಗಳಲ್ಲಿನ ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಹಸ್ತಕ್ಷೇಪದ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಏಪ್ರಿಲ್‌ನಲ್ಲಿ ಹೈಕಮಾಂಡಿಗೆ ಪತ್ರ ಬರೆದಿದ್ದರು ಹಾಗೂ ರಾಜ್ಯಪಾಲರಿಗೂ ಪತ್ರ ಬರೆದಿದ್ದರು. ಆದರೆ ಅರುಣ್ ಸಿಂಗ್ ಕರ್ನಾಟಕದ ಭೇಟಿಯಲ್ಲಿ ಮತ್ತಷ್ಟು ಸಚಿವರು ಈಶ್ವರಪ್ಪ ಈ ಮೊದಲು ನೀಡಿದ್ದ ದೂರುಗಳನ್ನೇ ಪ್ರತಿಧ್ವನಿಸಿದರು. ಈ ಕಾರಣಕ್ಕಾಗಿಯೇ ಅರುಣ ಸಿಂಗ್ ಅವರು ವಿಜಯೇಂದ್ರ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡುವಂತಾಯಿತು ಎಂದು ಬಿಜೆಪಿ ಮೂಲಗಳು ಹೇಳುತ್ತವೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಸಮಾನಾಂತರ ಆಡಳಿತಕ್ಕೆ ಮುಂದಾಗಿದ್ದರ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರಿಂದ ಹೈಕಮಾಂಡ್ ಅಸಮಾಧಾನಗೊಂಡಿದೆ ಮತ್ತು ಇದು ಯಡಿಯುರಪ್ಪ ಅವರ ಅಧಿಕಾರರಕ್ಕೆ ತೊಂದರೆ ತರಲು ಕಾರಣವಾಗಬಹುದು ಮತ್ತು ಯಡಿಯೂರಪ್ಪ ಅವರ ಪುತ್ರರ ರಾಜಕೀಯ ಭವಿಷ್ಯದ ಮೇಲೆಯೂ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯನ್ನೂ ಅರುಣ್ನೀ ಸಿಂಗ್ ನೀಡಿದ್ದಾರೆ ಎಂದು ಬಿಜೆಪಿ ಆಂತರಿಕ ವಲಯ ಹೇಳುತ್ತದೆ.
ಮುಖ್ಯವಾಗಿ ಯಡಿಯೂರಪ್ಪ ಅವರಿಗಿಂತ ಅವರ ಕುಟುಂಬದ ಆಡಳಿತದಲ್ಲಿನ ಹಸ್ತಕ್ಷೇಪದ ಬಗ್ಗೆ ಬಹುತೇಕ ನಾಯಕರು ಹಾಗೂ ಶಾಸಕರಿಗೆ ಅಸಮಾಧಾನವಿರುವುದನ್ನು ಅರುಣ ಸಿಂಗ್ ಭೇಟಿ ಸಂದರ್ಭದಲ್ಲಿ ಮನವರಿಕೆ ಮಾಡಲಾಗಿದೆ. ಈ ಕಾರಣಕ್ಕಾಗಿಯೇ ಅರುಣ ಸಿಂಗ್ ಅವರು ವಿಜಯೇಂದ್ರ ಅವರಿಗೂ ಈ ಬಗ್ಗೆ ಸೂಚನೆ ನೀಡಿ ಹೋಗಿದ್ದಾರೆ ಎನ್ನಲಾಗಿದೆ.
ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಬಹುತೇಕ ನಾಯಕರು ಯಡಿಯೂರಪ್ಪ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿಲ್ಲ ಬದಲಿಗೆ ಪುತ್ರ ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ. ಮುಖ್ಯವಾಗಿ ಎಚ್. ವಿಶ್ವನಾಥ ಅವರನ್ನು ಹೊರತುಪಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಲಸೆ ಬಂದ 17 ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಕ್ಕೆ ಬಲವಾಗಿ ನಿಂತರು. ಹೀಗಾಗಿಯೇ ಯಡಿಯೂರಪ್ಪ ನಾಯಕತ್ವ ಗಟ್ಟಿಯಾಯಿತು ಎಂದು ಮೂಲಗಳು ತಿಳಿಸಿವೆ.
ಅರುಣ್ ಸಿಂಗ್ ಅವರು ಯಾವುದೇ ಅಸಮಾಧಾನವಿದ್ದರೂ ಅದನ್ನು ಯಾವುದೇ ಕಾರಣಕ್ಕೂ ಪಕ್ಷದ ವೇದಿಕೆ ಬಿಟ್ಟು ಬಹಿರಂಗವಾಗಿ ವ್ಯಕ್ತಪಡಿಸುವುದು ಬೇಡ ಎಂದು ಖಡಕ್ ಆಗಿ ಹೇಳಿದ್ದಾರೆ. ಹಾಗೂ ನಾಯಕತ್ವದ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಮಾಧ್ಯಮದ ಮುಂದೆ ಹೋಗಿ ಒತ್ತಡ ತಂತ್ರಕ್ಕೆ ಮುಂದಾದರೆ ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತದೆ ಎಂದು ಅರುಣ್ ಸಿಂಗ್ ಅವರು ಯತ್ನಾಳ, ಅರವಿಂದ ಬೆಲ್ಲದ ಹಾಗೂ ವಿಶ್ವನಾಥ ಅವರಿಗೆ ವಿಶೇಷವಾಗಿ ಸೂಚಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಬಿಜೆಪಿಯ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಭೇಟಿಯ ನಂತರ ಯಡಿಯೂರಪ್ಪ ನಾಯಕತ್ವ ಸದ್ಯದ ಮಟ್ಟಿಗೆ ಮುಂದುವರಿಯುವುದು ಖಾತ್ರಿಯಾದರೂ ಯಡಿಯೂರಪ್ಪ ಅವರ ಕುಟುಂಬದ ಹಸ್ತಕ್ಷೇಪದ ಬಗ್ಗೆ ಹೈಕಮಾಂಡಿಗೆ ಮನವರಿಕೆ ಮಾಡುವಲ್ಲಿಯೂ ಒಂದು ಹಂತದಲ್ಲಿ ಸಫಲವಾಗಿದೆ ಎಂದೇ ಹೇಳಬಹುದು. ಅಂದರೆ ಯಡಿಯೂರಪ್ಪ ಕುಟುಂಬದವರಿಗೆ ಆಡಳಿತದಲ್ಲಿ ಎಲ್ಲಿ ವರೆಗೆ ನಿಮ್ಮ ಹಸ್ತಕ್ಷೇಪ ಇರುವುದಿಲ್ಲವೋ ಅಲ್ಲಿ ವರೆಗೆ ಯಡಿಯೂರಪ್ಪ ನಾಯಕತ್ವಕ್ಕೆ ತೊಂದರೆಯಾಗುವುದಿಲ್ಲ ಎಂಬ ಸಂದೇಶವನ್ನೂ ಹೈಕಮಾಂಡ್ ನೀಡಿದೆ ಎಂದರೆ ತಪ್ಪಾಗಲಾರದು.


ನಿಮ್ಮ ಕಾಮೆಂಟ್ ಬರೆಯಿರಿ