ಬೆಂಗಳೂರು: ವಿಶ್ವ ವಿಖ್ಯಾತ ಜೋಗದ ಸಿರಿಯ ವೈಭವವನ್ನು ಇನ್ಮುಂದೆ ವರ್ಷದ ಎಲ್ಲ ದಿನಗಳಲ್ಲೂ ಸಿಗುವಂತೆ ಯೋಜನೆ ರೂಪಿಸಲಾಗಿದೆ. ಜೋಗ ಜಲಪಾತಕ್ಕೆ ಅಣೆಕಟ್ಟಿನಿಂದ ನೀರು ಬಿಡುವ ವ್ಯವಸ್ಥೆ ಮಾಡಲಾಗುತ್ತಿದ್ದು,ವರ್ಷ ಪೂರ್ತಿ ಧುಮ್ಮಿಕ್ಕುವ ಜೋಗ ಜಲಪಾತ ನೋಡಬಹುದು ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಾಶಯಗಳ ನೀರನ್ನ ವಿದ್ಯುತ್,ವ್ಯವಸಾಯಕ್ಕೆ ಉಪಯೋಗವಾಗುತ್ತಿತ್ತು. ಇನ್ಮುಂದೆ ಪಿಪಿಎ ಮಾದರಿಯಲ್ಲಿ ಜಲಕ್ರೀಡೆಗೆ ಅವಕಾಶ ಮಾಡಿಕೊಂಡು, ಪ್ರವಾಸೋದ್ಯಮಕ್ಕೂ ಬಳಸಿಕೊಳ್ತೇವೆ. ಮೊದಲು ನೀರಿನ ಹಕ್ಕನ್ನ ಕೊಡ್ತಿರಲಿಲ್ಲ. ಆದರೆ, ಈಗ ಅಲ್ಲಿಯೂ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುತ್ತೇವೆ ಎಂದರು.
ಕರ್ನಾಟಕ ಪ್ರವಾಸಿ ತಾಣಗಳನ್ನು ನೋಡಲು ಕೇರಳ, ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆಯಿಂದ ಜನ ಬರುತ್ತಾರೆ. ಜಲ ಮಾರ್ಗದ ಮೂಲಕ ಹೊನ್ನಾವರದಿಂದ ಗೇರುಸೊಪ್ಪದ ವರೆಗೆ ಜಲ ಮಾರ್ಗ 35 ಕಿ.ಮಿ ಮೂಲಕ ಬೋಟಿಂಗ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸೋದ್ಯಮದಿಂದ ರಾಜ್ಯಕ್ಕೆ ಶೇ.18 ರಷ್ಟು ಜಿಡಿಪಿ ಬರುತ್ತಿದೆ. ಜಿಡಿಪಿಯಲ್ಲಿ ನಾವು ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದೇವೆ. ಇನ್ಮುಂದೆ ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ಜನಪ್ರಿಯ ಮಾಡುತ್ತೇವೆ ಎಂದು ತಿಳಿಸಿದರು.
ಲಾಕ್ಡೌನ್ನಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಈಗ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಲವು ರಿಯಾಯ್ತಿ ನೀಡಲಾಗಿದೆ. ರೆಸಾರ್ಟ್,ಮನರಂಜನೆ ಪಾರ್ಕ್ ಗೆ 50ರಷ್ಟು ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಪ್ರವಾಸಿ ಗೈಡ್ ಗಳಿಗೆ ಸಾಕಷ್ಟು ಆರ್ಥಿಕ ನಷ್ಟವಾಗಿದ್ದು, ಅದಕ್ಕಾಗಿ ಪರಿಹಾರದ ಹಣ ಅವರ ಬ್ಯಾಂಕ್ ಅಕೌಂಟ್ ಗೆ ಬಿಡುಗಡೆ ಮಾಡುತ್ತೇವೆ. ಮೋಟಾರು ವಾಹನ ತೆರಿಗೆಯಲ್ಲೂ ವಿನಾಯ್ತಿ ನೀಡಲಾಗಿದೆ ಎಂದರು.
ಹೆಲಿಟೂರಿಸಂ ಉದ್ದೇಶವಿದೆ..;
ರಾಜ್ಯದಲ್ಲಿ ಲಾಕ್ಡೌನ್ ನಿಂದ ಪ್ರವಾಸೋದ್ಯಮದ ಕೆಲದ ಚಟುವಟಿಕೆ ಸ್ಥಗಿತಗೊಂಡಿತ್ತು. ಲಾಕ್ಡೌನ್ ಬಳಿಕ ಪ್ರವಾಸೋದ್ಯಮದ ಬಾಗಿಲು ಈಗ ತೆರೆಯುತ್ತಿದ್ದೇವೆ. ಮುಂದಿನ ವಾರದಿಂದ ಬಹುತೇಕ ಎಲ್ಲವೂ ಪ್ರಾರಂಭವಾಗುತ್ತದೆ. ಜಂಗಲ್ ಲಾಡ್ಜ್ ಹೊಟೇಲ್ ಗಳನ್ನ ಪ್ರಾರಂಭಿಸುತ್ತೇವೆ. ಇರುವ ರೆಸಾರ್ಟ್, ಹೊಟೇಲ್ ಗಳನ್ನ ಬಳಸಿಕೊಳ್ಳುತ್ತೇವೆ. ಹೆಲಿ ಟೂರಿಸಂ ಮಾಡುವ ಉದ್ದೇಶವೂ ಇದೆ. ಪ್ರವಾಸೋದ್ಯಮ ಇಲಾಖೆಗೆ ವಾರ್ಷಿಕ 1000 ಕೋಟಿ ಅನುದಾನ ನಮಗೆ ಬೇಕಿದೆ. ಈಗ ಆರ್ಥಿಕ ಇಲಾಖೆ ಕೊಡುವುದಾಗಿ ಹೇಳಿದೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ