ಬೆಂಗಳೂರು : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆ ರೂಪಿಸಲು ಅನುಮೋದನೆ ಕೋರಿ ರಾಜ್ಯಪಾಲರಿಗೆ ಸಲ್ಲಿಸಿದ್ದ 1492.97 ರೂ.ಗಳ ಕೋಟಿ ಅನುದಾನಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.
ಗಿರಿಜನ ಉಪಯೋಜನೆಗೆ 100 ಕೋಟಿ ರೂ.ಗಳು, ವಿಶೇಷ ಘಟಕ (ಎಸ್‍ಸಿಪಿ) 300 ಕೋಟಿ ರೂ.ಗಳು ಹಾಗೂ ಸಾಮಾನ್ಯ 1092.97 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿದ್ದು, ಅದರಂತೆ ಕ್ರಿಯಾಯೋಜನೆ ರೂಪಿಸಲು ರಾಜ್ಯಪಾಲರಿಂದ ಅನುಮತಿ ದೊರೆತಿದೆ.
2021-22 ನೇ ಸಾಲಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಒದಗಿಸಲಾಗಿರುವ 1492.97 ಕೋಟಿ ರೂ.ಗಳ ಅನುದಾನಕ್ಕೆ ಮಂಡಳಿ ವ್ಯಾಪ್ತಿಯ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ನಂಜುಂಡಪ್ಪ ವರದಿ ಆದರಿಸಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕನ್ನಡಪ್ರಭ.ಕಾಮ್ ವರದಿ ಮಾಡಿದೆ.
ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳಡಿ ಮಂಡಳಿಯ ಒಟ್ಟು ಅನುದಾನದ ಶೇ. 84 ರಷ್ಟು ಅನುದಾನದಲ್ಲಿ ಮೈಕ್ರೋ ಯೋಜನೆಗೆ ಶೇ. 70 ರಷ್ಟು ಅನುದಾನವನ್ನು ತಾಲ್ಲೂಕುವಾರು ಹಂಚಿಕೆ ಮಾಡಲಾಗುವುದು. ಮ್ಯಾಕ್ರೋ ಯೋಜನೆಗೆ ಶೇ. 30 ರಷ್ಟು ಅನುದಾನವನ್ನು ಬೃಹತ್ ಮೊತ್ತದ 3 ರಿಂದ 4 ಯೋಜನೆಗಳಿಗೆ ಮಾತ್ರ ಹಂಚಿಕೆ ಮಾಡಲಾಗುವುದು. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯಗಳು, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ನೀರಾವರಿ, ಕುಡಿಯುವ ನೀರು, ರಸ್ತೆ ಮತ್ತು ಸಂಪರ್ಕ, ಅಂತರ್ಜಲ ಸಂರಕ್ಷಣೆ, ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಕಾಮಗಾರಿ ನಡೆಸಲಾಗುವುದು. ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಗಳಡಿ ಜಿಲ್ಲಾವಾರು ಸಾಮಾನ್ಯ, ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನಕ್ಕೆ ಕ್ರಿಯಾ ಯೋಜನೆ ಸಲ್ಲಿಸಿ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕು. ವಿಶೇಷ ಘಟಕ ಯೋಜನೆ (ಎಸ್‍ಸಿಪಿ) ಮತ್ತು ಗಿರಿಜನ ಉಪಯೋಜನೆ (ಟಿಎಸ್‍ಪಿ) ಅಡಿ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆಗೆ ಕ್ರಿಯಾಯೋಜನೆಯನ್ನು ಪ್ರತ್ಯೇಕವಾಗಿ ರೂಪಿಸಿ ಅನುಷ್ಠಾನಗೊಳಿಸಬೇಕಿದೆ.
ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ..
ಕೋವಿಡ್-19ರ ದುಷ್ಪರಿಣಾಮದಿಂದ ರಾಜ್ಯ ಆರ್ಥಿಕ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ಅನುದಾನ ಕಡಿತಗೊಳಿಸಿಲ್ಲ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಅನುದಾನ ವಿನಿಯೋಗಿಸಲಾಗುವುದು ಎಂದು ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.
ಕಳಪೆ ಕಾಮಗಾರಿ ನಡೆದು ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಕಣ್ಣಿಗೆ ಕಾಣುವಂತಹ ಬಹು ಜನೋಪಯೋಗಿ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಲಾಗುವುದು. ಡಾ. ನಂಜುಂಡಪ್ಪ ವರದಿ ಅನ್ವಯ ಕಲ್ಯಾಣ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 32 ತಾಲ್ಲೂಕುಗಳು ಹಿಂದುಳಿದಿವೆ. ಆ ತಾಲ್ಲೂಕುಗಳ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರಸಕ್ತ ಸಾಲಿನಲ್ಲೂ ಸುಮಾರು ಒಂದುವರೆ ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದು, ನಿಗದಿತ ಅವಧಿಯೊಳಗೆ ಪೂರ್ಣ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ