ಬೆಂಗಳೂರು:ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಬ್ಲ್ಯಾಕ್ ಮತ್ತು ಗ್ರೀನ್ ಫಂಗಸ್ ಎರಡೂ ಸೋಂಕು ಪತ್ತೆಯಾಗಿದೆ.
ಬೆಂಗಳೂರು ಪೀಡಿಯಾಟ್ರಿಕ್ ಫಿಸಿಯೋಥೆರಪಿಸ್ಟ್ (ಮಕ್ಕಳ ಭೌತಚಿಕಿತ್ಸಕ) ಡಾ.ಕಾರ್ತಿಕೇಯನ್ ಆರ್ ಎಂಬ ವೈದ್ಯರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು, ವರದಿ ಪ್ರಕಾರ, ಕಳೆದ ಏಪ್ರಿಲ್ ತಿಂಗಳಿನಲ್ಲಿ ವೈದ್ಯರಿಗೆ ಕೊರೊನಾ ಸೋಂಕು ತಗುಲಿತ್ತು. ಬಳಿಕ ಅವರ ಮುಖ ಹಾಗೂ ತಲೆಯಲ್ಲಿ ಅತೀವ್ರ ನೋವು ಕಾಣಿಸಿಕೊಂಡಿದ್ದು, ನಂತರ ಮೂಗು ಸೋರುವ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ವೈದ್ಯರು ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಗ್ಯ ಸ್ಥಿತಿ ಬ್ಲ್ಯಾಕ್ ಫಂಗಸ್’ನ ಸಾಮಾನ್ಯ ಲಕ್ಷಣದಂತೆ ಇರಲಿಲ್ಲ. ಮೂಗಿನಲ್ಲಿ ಹಸಿರು ಹಾಗೂ ಕಂದು ಬಣ್ಣದ ದ್ರವ ಕಂಡುಬಂದಿತ್ತು. ಫಂಗಲ್ ಕಲ್ಚರ್ ನಲ್ಲಿ ಗ್ರೀನ್ ಫಂಗಸ್ ಇರುವುದು ದೃಢಪಟ್ಟಿತ್ತು. ಎಂಡೋಸ್ಕೋಪಿಯಲ್ಲಿ ಮೂಗಿನಲ್ಲಿ ಕೀವು ಕಂಡು ಬಂದಿತ್ತು. ನಂತರ ಸಿಟಿ ಹಾಗೂ ಎಂಆರ್’ಐ ಸ್ಕ್ಯಾನ್ ನಲ್ಲಿ ಶಿಲೀಂಧ್ರ ಸೋಂಕು ದೃಢಪಟ್ಟಿತ್ತು.
ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಮೂಗಿನ ಮೂಳೆ ಕೊರೆದು ಸತ್ತ ಅಂಗಾಂಶಗಳನ್ನು ಮೊದಲು ಹೊರಗೆ ತೆಗೆದುಹಾಕಲಾಗಿದೆ. ಅಂಗಾಂಶಗಳಿಗೆ ರಕ್ತ ಪೂರೈಕೆ ಮಾಡುವುದರ ಮೇಲೆ ಕಪ್ಪು ಶಿಲೀಂಧ್ರ ಪರಿಣಾಮ ಬೀರುತ್ತದೆ. ಸತ್ತ ಅಂಗಾಂಶಗಳ ಮೇಲೆಯೇ ಈ ಶಿಲೀಂಧ್ರ ಬೆಳೆಯುವುದರಿಂದ ಎಂಟಿ ಫಂಗಲ್ ಔಷಧಿ ಒಂದರಿಂದಲೇ ಇದು ಗುಣವಾಗುವುದಿಲ್ಲ. ಹೀಗಾಗಿ ಮೊದಲು ಶಸ್ತ್ರಚಿಕಿತ್ಸೆ ನಡೆಸಿ ನಂತರ ವ್ಯಕ್ತಿಗೆ ಎಂಟಿ ಫಂಗಲ್ ಔಷಧಿ ನೀಡಲಾಗುತ್ತಿದೆ ಎಂದು ಬೆಂಗಳೂರಿನ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಇಎನ್‌ಟಿ ಮತ್ತು ಎಂಡೋಸ್ಕೋಪಿಕ್ ಸ್ಕಲ್ ಬೇಸ್ ಸರ್ಜನ್’ನ ಮುಖ್ಯ ಸಲಹೆಗಾರ ಡಾ.ಪ್ರಶಾಂತ್ ಆರ್ ರೆಡ್ಡಿ ಮಾಹಿತಿ ನೀಡಿದ್ದಾರೆ ಎಂದು ವರದಿ ಹೇಳಿದೆ.
ರೋಗಿಗೆ ಮಧುಮೇಹ ಸಮಸ್ಯೆ ಇರಲಿಲ್ಲ. ಆದರೆ, ಕೊರೊನಾ ಸೋಂಕಿನ ಬಳಿಕ ಮಧುಮೇಹ ಕಾಣಿಸಿಕೊಂಡಿದೆ. ಮೈಸೂರಿನಲ್ಲಿ ಕೋವಿಡ್ ಚಿಕಿತ್ಸೆ ಪಡೆಯುವ ವೇಳೆ ಸ್ಟಿರಾಯ್ಡ್ ಗಳನ್ನು ನೀಡಲಾಗಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದಿದ್ದರೆ ಇನ್ನೂ ಅಪಾಯವಾಗಬಹುದಿತ್ತು ಎಂದು ವೈದ್ಯರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ