ನಾಳೆಯಿಂದ ಕರಾವಳಿ-ಮಲೆನಾಡಿನಲ್ಲಿ ಮತ್ತೆ ಮಳೆ ಅಬ್ಬರ: ಮುನ್ಸೂಚನೆ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಜೂ.28ರಿಂದ ಜುಲೈ 1ರ ವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲ ದಿನಗಳಿಂದ ತಗ್ಗಿದ್ದ ಮಳೆ ಮತ್ತೆ ಬಿರುಸುಗೊಳ್ಳಲಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂ.28ರಿಂದ ಜು.1ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಮಳೆ ಆರಂಭವಾಗಿದೆ. ಹಲವೆಡೆ ಸಾಧಾರಣ ಮಳೆ ಸುರಿದಿದ್ದು, ಕರಾವಳಿಯಲ್ಲಿ ಕಡಲ್ಕೊರೆತ ಉಂಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಳೆ ಬಿರುಸಾಗಿದ್ದು, ಪಡುಬಿದ್ರಿಯಲ್ಲಿ ಕಡಲ್ಕೊರೆತವಾಗಿದೆ. ಕಾಪು ತಾಲ್ಲೂಕು ಮೂಳೂರಿನಲ್ಲಿ ಮನೆ ಚಾವಣಿ ಕುಸಿದು, ಮಹಿಳೆ ಗಾಯಗೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ ಭಾಗದಲ್ಲಿ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಚೇರಂಬಾಣೆ, ಬಕ್ಕ, ನಾಪೋಕ್ಲು, ತಲಕಾವೇರಿ ಸೇರಿ ವಿವಿಧೆಡೆ ಮಳೆಯಾಗುತ್ತಿದೆ. ಮೈಸೂರು ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.
ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇದೇ 29ರಿಂದ ಮಳೆ ಹೆಚ್ಚಾಗಲಿದ್ದು, ಈ ಜಿಲ್ಲೆಗಳಿಗೂ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ