ನವದೆಹಲಿ: ಕೋವಿಡ್-19 ಮೃತಪಟ್ಟ ಕುಟುಂಬಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ಕೊಡಲು ಮಾರ್ಗಸೂಚಿ ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಈ ನಿಟ್ಟಿನಲ್ಲಿ ಮಾರ್ಗಸೂಚಿ ರಚಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆರು ವಾರಗಳ ಕಾಲಾವಧಿಯನ್ನು ಕೋರ್ಟ್ ನೀಡಿದೆ. ಕೋವಿಡ್ನಿಂದ ಮೃತಪಟ್ಟ ಪ್ರತೀ ವ್ಯಕ್ತಿಯ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ ಒದಗಿಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾ| ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಸುಪ್ರೀಂ ನ್ಯಾಯಪೀಠ ಬುಧವಾರ ಈ ನಿರ್ದೇಶನ ನೀಡಿದೆ.
ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಒದಗಿಸಲು ಇರುವ ತೊಂದರೆಗಳ ಬಗ್ಗೆ ಕೇಂದ್ರ ಸರ್ಕಾರ ಕೂಡ ಕೋರ್ಟ್ ಬಳಿ ನಿವೇದಿಸಿಕೊಂಡಿದೆ. ವಿಪತ್ತು ಪರಿಹಾರ ನಿಧಿಯ ಹಣವನ್ನು ನೈಸರ್ಗಿಕ ವಿಕೋಪಗಳಿಗೆ ಮಾತ್ರ ಬಳಕೆ ಆಗಬೇಕೆಂಬ ಕಾನೂನು ಇದೆ. ಆದರೆ, ಕೋವಿಡ್ ಸಂತ್ರಸ್ತರಿಗೆ ಇದೇ ನಿಧಿಯಿಂದ ಪರಿಹಾರ ಒದಗಿಸಲು ಈ ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದು ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್-19ನಿಂದ ಮೃತ ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ 4 ಲಕ್ಷ ರೂ ಪರಿಹಾರ ಒದಗಿಸಿದರೆ ಎಸ್ಡಿಆರ್ಎಫ್ನಲ್ಲಿರುವ ಎಲ್ಲಾ ಹಣವೂ ಖಾಲಿಯಾಗಿ ಹೋಗುತ್ತದೆ. ಇನ್ನೂ ಹೆಚ್ಚುವರಿ ವೆಚ್ಚವೂ ಆಗಬಹುದು” ಎಂದು ಕೇಂದ್ರ ಸರಕಾರ ತನ್ನ ಅಸಹಾಯಕತೆ ತೋರ್ಪಡಿಸಿದೆ. ಕೋವಿಡ್ ಸಂತ್ರಸ್ತರಿಗೆ ಮಾತ್ರ ಪರಿಹಾರ ನೀಡಿದರೆ, ಬೇರೆ ರೋಗಗಳಿಂದ ಮೃತಪಟ್ಟವರ ಕುಟುಂಬಕ್ಕೆ ಇದು ಅನ್ಯಾಯ ಎನಿಸಬಹುದು ಎಂಬ ವಾದವನ್ನೂ ಅದು ಮುಂದಿಟ್ಟಿದೆ. ಈ ಕುರಿತು ಅಫಿಡವಿಟ್ ಸಲ್ಲಿಕೆ ಮಾಡಿದೆ.
ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡಲು ಎಸ್ಡಿಆರ್ಎಫ್ನ ಎಲ್ಲಾ ಹಣವನ್ನೂ ವ್ಯಯಿಸಿದಲ್ಲಿ ರಾಜ್ಯ ಸರ್ಕಾರಗಳ ಬಳಿ ಬೇರೆ ಅಗತ್ಯಗಳಿಗೆ ಹಣ ಇಲ್ಲದಂತಾಗುತ್ತದೆ. ಕೋವಿಡ್ ವಿರುದ್ಧ ಹೋರಾಟಕ್ಕೆ, ವೈದ್ಯಕೀಯ ಸರಬರಾಜು ಇತ್ಯಾದಿ ಅಗ್ಯಗಳ ಪೂರೈಕೆಗೆ, ಅಥವಾ ಚಂಡಮಾರುತ, ನೆರೆ, ಬರ ಇತ್ಯಾದಿ ಪ್ರಕೃತಿ ವಿಕೋಪಗಳನ್ನ ಎದುರಿಸಲು ಹಣದ ಕೊರತೆ ಎದುರಾಗುತ್ತದೆ. ಆದ್ದರಿಂದ ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಒದಗಿಸಲು ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಮಾಡಿಕೊಂಡ ಕೋರಿಕೆ ಈಡೇರಿಸಲು ರಾಜ್ಯ ಸರ್ಕಾರಗಳಿಂದ ಸಾಧ್ಯವಾಗದೇ ಹೋಗಬಹುದು” ಎಂದು ಅಫಿಡವಿಟ್ನಲ್ಲಿ ಕೇಂದ್ರ ತಿಳಿಸಿದೆ.
ಕೇಂದ್ರದ ವಾದದ ಮಧ್ಯೆಯೂ ಸುಪ್ರೀಂ ನ್ಯಾಯಪೀಠವು ಕೋವಿಡ್ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಸಂಬಂಧ ಮಾರ್ಗಸೂಚಿ ನೀಡಬೇಕೆಂದು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಆರು ವಾರಗಳ ಕಾಲಾವಕಾಶ ನೀಡಿದೆ. ಸೋಮವಾರ ಈ ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಪೀಠ ನಡೆಸಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ