ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕಾಯಂಗೊಳಿಸಲು ಉನ್ನತ ಶಿಕ್ಷಣ ಸಚಿವರಿಗೆ ಸಭಾಪತಿ ಹೊರಟ್ಟಿ ಪತ್ರ

posted in: ರಾಜ್ಯ | 0

ಹುಬ್ಬಳ್ಳಿ; ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ 15 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸರ್ಕಾರದ ಮಾನದಂಡಗಳು ಹಾಗೂ ಯು.ಜಿ.ಸಿ. ನಿಯಮಾವಳಿಯ ಪ್ರಕಾರ ಅರ್ಹತೆಯುಳ್ಳವರಾಗಿದ್ದು, ಈ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಉಮುಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದಿರುವ ಅವರು,ಪ್ರಸ್ತುತ ತಮ್ಮ ಇಲಾಖೆಯ ವತಿಯಿಂದ ಉಪನ್ಯಾಸಕರುಗಳ ನೇರ ನೇಮಕ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದಾಗಿ ತಿಳಿದು ಬಂದಿರುತ್ತದೆ. ಹೀಗಾಗಿ ಇ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕಳೆದ 15 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಹೇಳಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (ಮಾರ್ಚ್) ಮಧ್ಯಂತರ ಅವಧಿಯ ಸೇವೆಯನ್ನು ಪರಿಗಣಿಸದೇ ಪ್ರಸಕ್ತ ಶೈಕ್ಷಣಿಕ ವರ್ಷದ ಕೊನೆಯ ಅವಧಿ ವರೆಗೆ ಸೇವೆಯನ್ನು ಪರಿಗಣಿಸಬೇಕು ಹಾಗೂ ಇವರುಗಳ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಈಗಾಗಲೇ ತಮ್ಮನ್ನು ಕೋರಲಾಗಿತ್ತು. ಪ್ರಸ್ತುತ ತಮ್ಮ ಇಲಾಖೆಯ ವತಿಯಿಂದ ಉಪನ್ಯಾಸಕರುಗಳ ನೇರ ನೇಮಕ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದಾಗಿ ತಿಳಿದು ಬಂದಿರುತ್ತದೆ.
ಕಳೆದ 15-20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಅನೇಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರಲ್ಲಿ ಬಹುತೇಕರು ವಯೋಮಿತಿ ಮೀರುತ್ತಿದ್ದಾರೆ. ಬೋಧನಾ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಇವರು ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವುದರಿಂದ, ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸದರಿ ಉಪನ್ಯಾಸಕರುಗಳು ಹೊಸಬರಿಗಿಂತ ಹೆಚ್ಚು ಉತ್ತಮ ಪಾಠ ಮಾಡುವುದರಲ್ಲಿ ಸಂಶಯವಿಲ್ಲ.ಈ ಹಿನ್ನೆಲೆಯಲ್ಲಿ, ಒಂದು ನಿಗದಿತ ಅವಧಿಗೆ ಸೀಮಿತಗೊಳಿಸಿದಂತೆ (Cutoff Date) ಸದರಿಯವರ ಸೇವೆಯನ್ನು ಕಾಯಂಗೊಳಿಸಿದ ನಂತರ, ಉಳಿದ ಹುದ್ದೆಗಳನ್ನು ನೇರ ನೇಮಕಾತಿ ಮಾಡಬಹುದು ಎಂದು ಹೊರಟ್ಟಿ ಹೇಳಿದ್ದಾರೆ.
ಇಲ್ಲದಿದ್ದರೆ, ವಯೋಮಿತಿ ಮೀರುತ್ತಿರುವ ಅಪಾರ ಅನುಭವ ಹೊಂದಿರುವ ಉಪನ್ಯಾಸಕರಿಗೆ ತೀವ್ರ ಅನ್ಯಾಯವೆಸಗಿದಂತಾಗುತ್ತದೆ ಎನ್ನುವುದು ನನ್ನ ಭಾವನೆಯಾಗಿದೆ. ನಾನು ಶಿಕ್ಷಣ ಸಚಿವನಾಗಿದ್ದಾಗ ಪ್ರೌಢ ಶಾಲೆಗಳಲ್ಲಿನ ಅರೆಕಾಲಿಕ ಶಿಕ್ಷಕರನ್ನು ಕಾಯಂ ಮಾಡಿದ ಉದಾಹರಣೆಯನ್ನು ತಮ್ಮ ಅವಗಾಹನೆಗೆ ತರಬಯಸುತ್ತಿದ್ದು, ಕಾರಣಆ ಆದೇಶವನ್ನು ಪರಿಗಣಿಸಿ, ಅತಿಥಿ ಉಪನ್ಯಾಸಕರುಗಳನ್ನು ಕೂಡಲೇ ಕಾಯಂಗೊಳಿಸಬೇಕೆಂದು ಕೋರುತ್ತೇನೆ ಎಂದು ವಿಧಅನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪತ್ರದ ಮೂಲಕ ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ