ಜುಲೈ ೧, ವೈದ್ಯರ ದಿನ…ಸ್ಮರಿಸೋಣ ಅವರ ಅವಿರತ ಸೇವೆಯನು..

(ಜುಲೈ ೧ ರಂದು ವೈದ್ಯರ ದಿನವಾಗಿದ್ದು, ಆ ನಿಮಿತ್ತ ಈ ಲೇಖನ)

ಪ್ರತಿ ವರ್ಷ ಭಾರತದಲ್ಲಿ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಿದರೆ, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾರ್ಚ್-೩೦, ಬ್ರೆಜಿಲ್‌ನಲ್ಲಿ ಅಕ್ಟೋಬರ್-೧೯, ಕೆನಡಾದಲ್ಲಿ ಮೇ-೧, ಕ್ಯೂಬಾದಲ್ಲಿ ಡಿಸೆಂಬರ್-೩, ಆಸ್ಟ್ರೇಲಿಯಾದಲ್ಲಿ ಮಾಚ್-೩೦, ಇರಾನ್‌ದಲ್ಲಿ ಅಗಸ್ಟ್-೨೩, ವಿಯಟ್ನಾಂದಲ್ಲಿ ಫೆಬ್ರವರಿ-೨೫ ಹಾಗೂ ನೇಪಾಳದಲ್ಲಿ ಮಾರ್ಚ್-೪ ರಂದು ಆಚರಿಸಲಾಗುತ್ತಿದೆ. ದೇಶಗಳು ಬದಲಾದರೂ ಕೂಡ ಪ್ರತಿ ದೇಶವು ತನ್ನ ದೇಶದ ನಾಗರಿಕರನ್ನು ಅನಾರೋಗ್ಯದಿಂದ ಮುಕ್ತಗೊಳಿಸಿ ಉತ್ತಮ ಆರೋಗ್ಯಗಳಾಗುವಂತೆ ಚಿಕಿತ್ಸೆ ನೀಡಿ, ಸೇವೆ ಸಲ್ಲಿಸುತ್ತಿರುವ ವೈದ್ಯರುಗಳಿಗೆ ಗೌರವವನ್ನು ಸಮರ್ಪಿಸುತ್ತವೆ.
ಪಶ್ಚಿಮ ಬಂಗಾಲದ ಹಿಂದಿನ ಮುಖ್ಯಮಂತ್ರಿ ವೈದ್ಯ ಶ್ರೇಷ್ಠ ಭಾರತ ರತ್ನ ಡಾ. ಬಿಧನ್ ಚಂದ್ರ ರಾಯ್ ಅವರು ವೈದೈಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಜುಲೈ ೧ ರಂದು ವೈದ್ಯರ ದಿನವನ್ನಾಗಿ ಭಾರತದಲ್ಲಿ ೧೯೯೧ ರಿಂದ ಆಚರಿಸಲಾಗುತ್ತಿದೆ. (ಡಾ.ಬಿ.ಸಿ.ರಾಯ್ ಜನನ ಜುಲೈ ೧ ೧೮೮೨, ನಿಧನ ಜುಲೈ ೧ ೧೯೬೨)
ಒಬ್ಬ ಜನಾನುರಾಗಿ ವೈದ್ಯರಾಗಿ, ಜನಸೇವೆ, ಮಾಡುತ್ತ ತಮ್ಮ ದೂರದೃಷ್ಟಿ ಮತ್ತು ನಿಲುವುಗಳಿಂದ ಯಾವುದೇ ಭೇದ-ಭಾವ ಮಾಡದೇ, ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿ, ಜನತೆಗೆ ಸೂಕ್ತವಾದ ಚಿಕಿತ್ಸೆ ನೀಡಿ ಜನರ ಆರೋಗ್ಯದ ರಕ್ಷಣೆ ಮಾಡುವ ಜೊತೆಗೆ ಸಮಾಜ ಮುಖಿ ನಾಯಕರಾಗಿದ್ದ ಬಿ.ಸಿ. ರಾಯ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗಿಯಾಗಿದ್ದರು. ಕೆಲಕಾಲ ಮಹಾತ್ಮಾ ಗಾಂಧೀಜಿಯವರ ವೈದ್ಯರೂ ಆಗಿದ್ದರು. ನಂತರದಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರದ ದಿನಗಳಲ್ಲಿ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದರು. ಅಡಳಿತದಲ್ಲಿ ಮುಂದೆ ನಿಂತು ಕೆಲಸ ಮಾಡಿ, ವೈದ್ಯ ಲೋಕಕ್ಕೆ ಅಪರೂಪದ ಕೊಡುಗೆ ನೀಡಿದ್ದಾರೆ.
ಪಶ್ಚಿಮ ಬಂಗಾಲದ ಜಾಧವಪುರದಲ್ಲಿ ಕ್ಷಯ ರೋಗ ಆಸ್ಪತ್ರೆ, ಚಿತ್ತರಂಜನ್ ಅರ್ಬುದ ಆಸ್ಪತ್ರೆ ಮತ್ತು ಸೇವಾ ಸದನ- ಕಮಲಾ ನೆಹರು ಸ್ಮರಣಾರ್ಥ ಆಸ್ಪತ್ರೆ, ಮತ್ತು ವಿಕ್ಟೋರಿಯ ವೈದ್ಯ ವಿಜ್ಞಾನ ಕಾಲೇಜುಗಳನ್ನು ಡಾ.ರಾಯ್ ಆಡಳಿತಾವಧಿಯ ೧೪ ವರ್ಷಗಳ ಕಾಲಾವಧಿಯಲ್ಲಿ ಸ್ಥಾಪಿಸಲಾಯಿತು. ಮೆಡಿಕಲ್ ಕೌನ್ಸಿಲ್ ಆಫ ಇಂಡಿಯಾ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸ್ಥಾಪನೆಯಲ್ಲಿಯೂ ಡಾ.ರಾಯ್ ಪ್ರಮುಖ ಪಾತ್ರ ವಹಿಸಿದ್ದರು.
ಮುಖ್ಯಮಂತ್ರಿಯಾದರೂ ಕೂಡ ಅವರು ರೋಗಿಗಳ ಆರೈಕೆಯನ್ನು ಮಾಡುತ್ತ, ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಇವರ ಗಣನೀಯ ಸೇವೆಯನ್ನು ಪರಿಗಣಿಸಿ, ಭಾರತ ಸರಕಾರವು ೧೯೬೧ರ ಪೇಬ್ರವರಿ ೪ ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಡಾ. ಬಿ.ಸಿ. ರಾಯ್ ಅವರು ವೈದ್ಯ ಲೋಕಕ್ಕೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಕೊರೊನಾ ಸಂದರ್ಭದಲ್ಲಿ ವೈದ್ಯರ ಮಹತ್ವ ಇನ್ನೂ ಹೆಚ್ಚಿದೆ. ವೈದ್ಯರ ಮೇಲೆ ಹಲ್ಲೆಗಳಾಗುತ್ತಿದ್ದರೂ ನಿರಂತರವಾಗಿ ಜನಸಮುದಾಯದ ಸೇವೆಯನ್ನು ಮಾಡುತ್ತಿದ್ದಾರೆ. ವೈದ್ಯರ ಶಿಸ್ತು, ಸಂಯಮ, ಸಮಯ ನಿರ್ವಹಣೆ, ದೂರದೃಷ್ಟಿ, ಮಾನವೀಯ ಗುಣಗಳು ರೋಗಿಗಳ ಮೇಲೆ ಅಪಾರ ಪರಿಣಾಮ ಬೀರುತ್ತಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ -೧೯ರಿಂದ ಉಂಟಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ರಕ್ಷಿಸುವುದಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡು ರೋಗದ ವಿರುದ್ಧ ಹೋರಾಡುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಭಾರತೀಯ ವೈದ್ಯರನ್ನು ಮುಕ್ತ ಕಂಠದಿಂದ ಪ್ರಸಂಶೆ ಮಾಡಿದ್ದು ನಿಜಕ್ಕೂ ನಮ್ಮ ವೈದ್ಯರ ಸೇವೆ ಶ್ಲಾಘನೀಯ.
ದೇಶಕ್ಕೆ ಅನ್ನ ನೀಡುವ ರೈತನಂತೆ ವೈದ್ಯರೂ ಕೂಡಾ ಬದುಕಿಗೆ ಬೆನ್ನೆಲಬು. ವೈದ್ಯರು ಜೀವ ನೀಡುವ ಮತ್ತು ಬದುಕು ಸಹನೀಯವಾಗಿಸುವ ನಮ್ಮ ನಡುವಿನ ದೇವರು. ನಮ್ಮ ಕಾಣಿಗೆ ಕಾಣುವ ನಿತ್ಯ ದೇವರು. ಬಡವ ಬಲ್ಲಿದರೆಂಬ ವ್ಯತ್ಯಾಸವಿಲ್ಲದೇ ಆರೋಗ್ಯ ಕಾಳಜಿ ಮಾಡುವರು. ವೈದ್ಯರು ಚಿಕಿತ್ಸೆ ನೀಡುವ ಮುನ್ನ ನಾವೂ ಭಗವಂತನ ಪ್ರಾರ್ಥನೆ ಮಾಡಿ ಚಿಕಿತ್ಸೆ ನೀಡುತ್ತೇವೆ. ಅಂತಿಮವಾದುದು ಅವನ ಇಚ್ಛೆ’ ಎಂದು ಎಲ್ಲ ವೈದ್ಯರೂ ಸೌಜನ್ಯದಿಂದ ಹೇಳುತ್ತಾರೆಂಬುದು ನಿಜ. ಆದರೆ ಕಾಣದ ಭಗವಂತನ ಜೀವಂತ ರೂಪ ವೈದ್ಯರೆಂಬುದು ಒಮ್ಮತದ ಮಾತು.
ಕೊರೊನಾ ರೂಪಾಂತರಗೊಳ್ಳುತ್ತಿದ್ದು, ವೈದ್ಯಕೀಯ ಲೋಕಕ್ಕೆ ಸವಾಲುಗಳನ್ನುಒಡ್ಡುತ್ತಿದೆ. ವೈದ್ಯರು ಸಕಾಲದಲ್ಲಿ ಎಲ್ಲವನ್ನೂ ಹಿಮ್ಮೆಟಿಸುತ್ತ ಸಾರ್ವಜನಿಕರಿಗೆ ಆರೋಗ್ಯ ಭಾಗ್ಯವನ್ನು ನೀಡುತ್ತಿದ್ದಾರೆ. ಈ ನಡುವೆ ನೂರಾರು ವೈದ್ಯರು ಕೊರೊನಾ ಸೇವೆಯಲ್ಲಿ ಮೃತಪಟ್ಟಿದ್ದಾರೆ ವೈದ್ಯರುಗಳ ಸೇವೆಯನ್ನು ಪ್ರತಿಯೊಬ್ಬರು ಗೌರವಿಸಬೇಕಾಗಿದೆ.
– ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement