ಡಿಆರ್‌ಡಿಒ ಮಾಜಿ ವಿಜ್ಞಾನಿ, ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ನಿಧನ, ದೇಹದಾನ

ಬೆಂಗಳೂರು: ಖ್ಯಾತ ವಿಜ್ಞಾನ ಬರಹಗಾರ, ಡಿಆರ್​ಡಿಒ ಮಾಜಿ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ (59) ಇಂದು (ಶುಕ್ರವಾರ) ಮಧ್ಯಾಹ್ನ 1 ಗಂಟೆಗೆ ವಿಧಿವಶರಾಗಿದ್ದಾರೆ.

ಸುಧೀಂದ್ರ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಪ್ರಶಸ್ತಿ ಘೋಷಿಸಿದ ದಿನವೇ ಅವರು ನಿಧನರಾಗಿದ್ದಾರೆ.

ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ 22 ವರ್ಷ ಸೇವೆ ಸಲ್ಲಿಸಿದ್ದ ಅವರು ನಂತರ ಸ್ವಯಂನಿವೃತ್ತಿ ಪಡೆದು ಜೈನ್ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದ ಅನೇಕ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಅವರು ಜನಪ್ರಿಯರಾಗಿದ್ದರು.

10 ದಿನಗಳ ಹಿಂದೆ ಸುಧೀಂದ್ರ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಚಿಕಿತ್ಸೆಗೆಂದು ಜೆಪಿ ನಗರದಲ್ಲಿರುವ ಆಸ್ಟರ್‌ ಆರ್‌ ವಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 2ರಂದು) ನಿಧನರಾಗಿದ್ದಾರೆ. ಸುಧೀಂದ್ರ ಅವರ ಆಸೆಯಂತೆಯೆ ಕುಟುಂಬಸ್ಥರು ಅವರ ದೇಹದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಟವಿ-9 ಕನ್ನಡ ಸುದ್ದಿ ವಾಹಿನಿ ವರದಿ ಮಾಡಿದೆ.
ಕನ್ನಡದಲ್ಲಿ ವಿಜ್ಞಾನ ಅಂಕಣಗಳಿಗೆ ಖ್ಯಾತರಾಗಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಅವರ ದೇಹವನ್ನು ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹಸ್ತಾಂತರ ಮಾಡಲಾಗಿದೆ.
ತೀವ್ರ ಹೃದಯಾಘಾತ:
ಡಿ.ಆರ್.ಡಿ.ಒ ಮಾಜಿ ವಿಜ್ಞಾನಿ ​ ಹಾಲ್ದೊಡ್ಡೇರಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ವೈದ್ಯರು ಅವರ ಮೆದುಳು ನಿಷ್ಕ್ರಿಯ (Brain Dead) ಹಂತಕ್ಕೆ ತಲುಪಿದೆ. ಪರಿಸ್ಥಿತಿ ಕಷ್ಟವಿದೆ ಎಂದು ಹೇಳಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಚಿಕಿತ್ಸೆಯಲ್ಲಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಅವರನ್ನು ತಜ್ಞ ವೈದ್ಯರ ತಂಡ ನೋಡಿಕೊಳ್ಳುತ್ತಿತ್ತು. ಸುಧೀಂದ್ರ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರಾದರೂ ಅವರಿಗೆ ಪ್ರಜ್ಞೆ ಇಲ್ಲವಾಗಿತ್ತು.
ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ
ಖ್ಯಾತ ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ (59) ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಮನೋಜ್ಞವಾಗಿ ಬರೆಯುತ್ತಿದ್ದ ಕೆಲವೇ ಬರಹಗಾರರಲ್ಲಿ ಒಬ್ಬರಾಗಿದ್ದರು. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಅಗಲುವಿಕೆಯ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾರವಾರ : ರಸ್ತೆ ಅಪಘಾತದಲ್ಲಿ ಖ್ಯಾತ ವೈದ್ಯ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement