ಸಂಪೂರ್ಣ ತಿರಸ್ಕರಿಸಬೇಕಾಗಿಲ್ಲ.. ವಿವಾದಾತ್ಮಕ ಭಾಗ ತೆಗೆದುಹಾಕಿ ಕೃಷಿ ಕಾಯ್ದೆ ಜಾರಿಗೆ ತರಬಹುದು’ ಎಂದ ಶರದ್‌ ಪವಾರ್‌

ನವದೆಹಲಿ; ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿಲ್ಲ. ಬದಲಾಗಿ, ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕಿ ಜಾರಿಗೆ ತರಬಹುದು ಎಂಬ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಅಭಿಪ್ರಾಯವನ್ನು ಕೇಂದ್ರವು ಶುಕ್ರವಾರ ಸ್ವಾಗತಿಸಿದೆ.
‘ಆರು ತಿಂಗಳಿನಿಂದ ಆಂದೋಲನ ನಡೆಸುತ್ತಿರುವ ರೈತರಿಗೆ ಸಮಸ್ಯೆಯೆಂದು ತೋರುವ ಈ ಕಾನೂನಿನ ಭಾಗಗಳನ್ನು ಮರುಪರಿಶೀಲಿಸಲು ನರೇಂದ್ರ ಮೋದಿ ಸರ್ಕಾರ ಸಿದ್ಧವಿದೆ,” ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕಳೆದ ವರ್ಷ ಅಂಗೀಕರಿಸಿದ ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ 2020ರ ನವೆಂಬರ್‌ನಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಈ ಮೂರು ವಿವಾದಾದ್ಮಕ ಕೃಷಿ ಕಾಯ್ದೆಗಳ ಬಗ್ಗೆ ರೈತರು ವಿರೋಧಿಸುತ್ತಿದ್ದಾರೆ..
ಕೇಂದ್ರ ಮಾಜಿ ಕೃಷಿ ಸಚಿವರಾದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‍ ಈ ಕಾಯ್ದೆಗಳ ಬಗ್ಗೆ ಗುರವಾರ ಮಾತನಾಡಿ, ”ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬದಲು ಕೆಲವು ತಿದ್ದುಪಡಿಗಳನ್ನು ಮಾಡಬಹುದು ಎಂದು ಸರ್ಕಾರಿ ಸುದ್ದಿವಾಹಿನಿ ದೂರದರ್ಶನದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, “ಮಾಜಿ ಕೃಷಿ ಸಚಿವರ ಈ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಕೇಂದ್ರ ಸರ್ಕಾರ ಅವರ ಈ ಹೇಳಿಕೆಯನ್ನು ಒಪ್ಪುತ್ತದೆ ಎಂದು ನಾನು ಪವಾರ್‌ಗೆ ಹೇಳಲು ಬಯಸುತ್ತೇನೆ. ನಾವು ಈ ವಿಚಾರವನ್ನೇ ರೈತ ಸಂಘದೊಂದಿಗೆ ಹನ್ನೊಂದು ಬಾರಿ ಚರ್ಚಿಸಿದ್ದೇವೆ,” ಎಂದು ತಿಳಿಸಿದ್ದಾರೆ.
ಚರ್ಚೆಯ ಮೂಲಕ ಈ ವಿಷಯವನ್ನು ಪರಿಹರಿಸಲಾಗುವುದು ಎಂದು ಕೇಂದ್ರ ಸರ್ಕಾರ ಆಶಿಸುತ್ತಿದೆ. ಇದರಿಂದಾಗಿ ಈ ಆಂದೋಲನ ಕೊನೆಗೊಳ್ಳುತ್ತದೆ ಹಾಗೂ ಮಸ್ಯೆಯೆಂದು ತೋರುವ ಸಮಸ್ಯೆಗಳನ್ನು ಕಾಯ್ದೆಯಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಸಿದ್ಧವಾಗಿದೆ,” ಎಂದು ತೋಮರ್‌ ಹೇಳಿದರು.
ಈ ವರ್ಷದ ಫೆಬ್ರವರಿಯಲ್ಲಿ, ಪವಾರ್‌ನ ಪಕ್ಷ ಎನ್‌ಸಿಪಿ ಮೂರು ವಿವಾದಾತ್ಮಕ ಕೃಷಿ-ಮಾರುಕಟ್ಟೆ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿತ್ತು. ಇದಕ್ಕೂ ಮೊದಲು, ಜನವರಿಯಲ್ಲಿ, 80 ರ ಹರೆಯದ ಪವಾರ್‌ ಸರಣಿ ಟ್ವೀಟ್‌ ಮಾಡಿ, ಕೇಂದ್ರ ಸರ್ಕಾರದ ಈ ಕೃಷಿ ಕಾಯ್ದೆಗಳನ್ನು ಪ್ರಬಲವಾಗಿ ಟೀಕಿಸಿದ್ದರು. ”ಈ ಕಾಯ್ದೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ದೇಶದಲ್ಲಿ ಎಪಿಎಂಸಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ,” ಎಂದು ಹೇಳಿದ್ದರು.
ಈ ಸರ್ಕಾರ (ಕೇಂದ್ರ) ರೈತರನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ನೀವು ಅಂತಹ ಸರ್ಕಾರವನ್ನು ಉರುಳಿಸಬಹುದು,” ಎಂದು ಜನವರಿಯಲ್ಲಿ ಮುಂಬೈನಲ್ಲಿ ನಡೆದ ರೈತರ ಸಭೆಯನ್ನುದ್ದೇಶಿಸಿ ಪವಾರ್‌ ಮಾತನಾಡಿದ್ದರು.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement