ನನಗೂ ಒಬ್ಬ ಆಪ್ತ ಸಹಾಯಕ ಬೇಕು: ತಾಪಂ ಇಒಗೆ ಪತ್ರ ಬರೆದ ಗ್ರಾಪಂ ಅಧ್ಯಕ್ಷೆ..!

posted in: ರಾಜ್ಯ | 0

ಕೊಪ್ಪಳ: ಶಾಸಕರು, ಸಚಿವರು ಸರ್ಕಾರದ ವತಿಯಿಂದಲೇ ಆಪ್ತ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಹಾಗೆಯೇ ಗ್ರಾಮ ಪಂಚಾಯತ ಅಧ್ಯಕ್ಷರಿಗೂ ನೇಮಕ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿ ಗ್ರಾಪಂ ಅಧ್ಯಕ್ಷೆಯೊಬ್ಬರು ಪತ್ರ ಬರೆದಿದ್ದಾರೆ…!
ಈಗ ಸಾಮಾಜಿಕ ಜಾಲತಾಣದಲ್ಲಿ ಈ ಪತ್ರ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಪಂ ಅಧ್ಯಕ್ಷೆ ಶಾಂತಾ ಎಂಬವರು ಈ ಪತ್ರವನ್ನು ಬರೆದಿದ್ದಾರೆ. ಅವರು ಯಲಬುರ್ಗಾ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸಹಾಯಕರನ್ನು ನೇಮಿಸಿಕೊಳ್ಳಲು ಒಪ್ಪಿಗೆ ಕೇಳಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಮುರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಹಾಯಕರ ಸೇವೆಯನ್ನು ಪಡೆಯುವ ಕುರಿತು ಎಂದು ವಿಷಯ ನಮೂದಿಸಲಾಗಿದೆ. ಜೂನ್ 29ರಂದು ಬರೆದಿರುವ ಪತ್ರ ಈಗ ವೈರಲ್ ಆಗಿದೆ.
ಪತ್ರದ ವಿವರ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಕೆಳಗೆ ಸಹಿ ಮಾಡಿದ ನಾನು ಅಧ್ಯಕ್ಷರು ಗ್ರಾಮ ಪಂಚಾಯಿತಿ ಮುರಡಿ ಇದ್ದು, ನಾನು ಅಷ್ಟೊಂದು ಸುಶಿಕ್ಷಿತೆ ಅಲ್ಲದೇ ಇರುವ ಪ್ರಯುಕ್ತ ಇಲಾಖೆಯ ವಿವಿಧ ಯೋಜನೆಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅನುಷ್ಠಾನಗೊಳಿಸುವಲ್ಲಿ ಕಷ್ಟವಾಗುತ್ತಿದೆ. ಕಾರಣ ಒಬ್ಬ ವ್ಯಕ್ತಿಯನ್ನು ಆಪ್ತ ಸಹಾಯಕರೊಂದಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸಲು ಅನುಮತಿ ನೀಡಲು ಕೋರಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಎಷ್ಟೋ ಹಳ್ಳಿಗಳಲ್ಲಿ ಮೀಸಲಾತಿ ಆಧಾರದ ಮೇಲೆ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಿ ಆಕೆಯ ಪತಿ ಅಧಿಕಾರ ನಡೆಸುತ್ತಿರುತ್ತಾರೆ. ಆದರೆ ಶಾಂತ ಯೋಜನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವ ಮನಸ್ಸು ಹೊಂದಿದ್ದು, ಅದಕ್ಕಾಗಿ ಅಪ್ತ ಸಹಾಯಕನಿಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಪತ್ರವನ್ನು ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ವೈರಲ್‌ ಆಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ