ಚಾಮರಾಜನಗರ ಆಮ್ಲಜನಕ ದುರಂತ: ಮೃತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಹೈ ಕೋರ್ಟ್​ ಸೂಚನೆ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2ರಂದು ನಡೆದಿದ್ದ ಆಮ್ಲಜನಕ ದುರಂತ ಪ್ರಕರಣದಲ್ಲಿ ಮೃತಪಟ್ಟ 13 ಮೃತರಿಗೆ 5 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಆಮ್ಲಜನಕ ದುರಂತದಿಂದ 24 ಮಂದಿ ಮೃತಪಟ್ಟಿದ್ದರು. ಆಮ್ಲಜನಕ ಕೊರತೆಯಿಂದ ಬೆಳಗ್ಗೆ ರಾತ್ರಿ 13 ಜನರು ಮೃತಪಟ್ಟಿದ್ದು. ಇವರ 13 ಸಂಬಂಧಿಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ನಂತರ ಮೃತಪಟ್ಟ 11 ಜನರಿಗೆ ತಲಾ 2 ಲಕ್ಷ ಪರಿಹಾರ ನೀಡಬೇಕು ಎಂದು ಹೈಕೋರ್ಟ್‌ ಸೂಚಿಸಿದೆ. ಇದೇ ವೇಳೆ ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಕೂಡ ನಡೆಯುತ್ತಿದ್ದು, ಆಯೋಗದ ವರದಿ ನಂತರ ಹೆಚ್ಚುವರಿ ಪರಿಹಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.
ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಈ ಆಮ್ಲಜನಕ ದುರಂತ ದೇಶಾದ್ಯಂತ ಸುದ್ದಿಯಾಗಿತ್ತು. ಅಲ್ಲದೇ ಈ ಪ್ರಕರಣ ಕುರಿತು ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಅವರನ್ನು ತನಿಖಾಧಿಕಾರಿಯಾಗಿ ನಿಯೋಜಿಸಿತ್ತು. ಆದರೆ ಮರುದಿನವೇ ಹೈಕೋರ್ಟ್ ಈ ಪ್ರಕರಣದ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸಿ ನಿವೃತ್ತ ನ್ಯಾಯಮೂರ್ತಿ ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಉನ್ನತ ಮಟ್ಟದ ಸಮಿತಿ ನೇಮಿಸಿತ್ತು. ಅದೇ ದಿನ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ನ್ಯಾಯಾಂಗ ತನಿಖೆ ಒಂದು ತಿಂಗಳ ಒಳಗೆ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರನ್ನು ನೇಮಿಸಿತ್ತು.
ಮೈಸೂರಿನಲ್ಲಿನ ಆಮ್ಲಜನಕ ಸಿಲಿಂಡರ್ ಮರುಪೂರಣ ಘಟಕದಿಂದ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿ. ಆಸ್ಪತ್ರೆಯ ಆಡಳಿತ ಜಾಗರೂಕರಾಗಿದ್ದರೆ, ಪೂರೈಕೆದಾರರು ಸಮಯೋಚಿತವಾಗಿ ಮರುಪೂರಣಗೊಳಿಸಿದ್ದರೆ ಅಮೂಲ್ಯ ಜೀವಗಳ ಹಾನಿತಪ್ಪಿಸಬಹುದಿತ್ತು ಎಂದು ಹೈಕೋರ್ಟ್‌ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ವರದಿ ನೀಡಿತ್ತು.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

ಈ ಘಟನೆ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಎಂ ಡಿ ರವಿ ಹಾಗೂ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನಡುವಿನ ಕಚ್ಚಾಟಕ್ಕೂ ಕಾರಣವಾಗಿತ್ತು. ಎರಡು ಜಿಲ್ಲಾಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿತ್ತು. ಅಲ್ಲದೇ ಈ ಘಟನೆಗೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹೊಣೆ ಎನ್ನಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಹೈ ಕೋರ್ಟ್​ ಬಳಿಕ ರೋಹಿಣಿ ಸಿಂಧೂರಿಗೆ ಕ್ಲೀನ್ ​ಚಿಟ್​ ನೀಡಿತ್ತು. ಅಲ್ಲದೇ, ನ್ಯಾಯಾಂಗ ತನಿಖೆಯಲ್ಲಿ ಜಿಲ್ಲಾಧಿಕಾರಿ ಎಂ ಡಿ ರವಿ ಅವರ ವೈಫಲ್ಯದ ಬಗ್ಗೆಯೂ ಹೇಳಿತ್ತು.
ಇದಕ್ಕೂ ಮುನ್ನ ಕೂಡ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕೊಂಡಿದ್ದ ನ್ಯಾಯಾಪೀಠ, ಮೃತ ಸಂತ್ರಸ್ಥರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಿತ್ತು. ಹೈಕೋರ್ಟ್ ಸೂಚನೆ ನೀಡಿದ ಮೇರೆಗೆ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ.ಗಳ ಪರಿಹಾರ ನೀಡಿತ್ತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement