ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಸ್ಕೃತಿ ಸಂಶೋಧನಾ ಕೇಂದ್ರಕ್ಕೆ ಶಿಲಾನ್ಯಾಸ

posted in: ರಾಜ್ಯ | 0

ಗೋಕರ್ಣ: ಗೋಕರ್ಣದ ಅಶೋಕೆಯಲ್ಲಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಸ್ಕೃತಿ ಸಂಶೋಧನಾ ಕೇಂದ್ರಕ್ಕೆ ಬುಧವಾರ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಮತ್ತು ಗುಲ್ಬರ್ಗ ಜಿಲ್ಲೆ ಗವ್ಹಾಂರ ಮಠದ ಶ್ರೀ ತ್ರಿವಿಕ್ರಮಾನಂದ ಮಹಾರಾಜ್ ಶಿಲಾನ್ಯಾಸ ನೆರವೇರಿಸಿದರು.
ಕರ್ಣಾಟಕ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ 1.4 ಕೋಟಿ ರೂ.ಗಳ ಅಂದಾಜು ವೆಚ್ಚದ ಮೊದಲ ಹಂತದ ಕಾಮಗಾರಿ ಆರಂಭವಾಗಿದ್ದು, ಎಂಟು ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಭಾರತದ ಪ್ರಾಚೀನ ಸಂಸ್ಕೃತಿ, ಆಚರಣೆ, ವಿಚಾರಧಾರೆ ಬಗೆಗಿನ ಸಂಶೋಧನೆಗಾಗಿಯೇ ಮೀಸಲಾಗಿರುವ ಈ ಸಂಶೋಧನಾ ಕೇಂದ್ರದಲ್ಲಿ, ಪ್ರಾಚೀನ ಆಚಾರ- ವಿಚಾರಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ವಿಶ್ಲೇಷಿಸುವ ಮೂಲಕ ಭಾರತೀಯ ಜ್ಞಾನಸಂಪತ್ತಿನ ವೈಜ್ಞಾನಿಕವಾಗಿ ಊರ್ಜಿತಗೊಳಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ನಡೆಯಲಿವೆ. ಸಂಶೋಧನಾ ಕೇಂದ್ರ ಆರಂಭಿಕವಾಗಿ ಗ್ರಂಥಾವಲೋಕನ, ಶೋಧಪ್ರಯೋಗ, ಪುರಾಲೇಖ, ಜನಸಾಮಾನ್ಯರಿಗೆ ಭಾರತೀಯ ಸಂಸ್ಕೃತಿಯ ಶಿಕ್ಷಣ ಮತ್ತು ತರಬೇತಿ ನೀಡುವ ವಿಭಾಗಗಳು ಕಾರ್ಯನಿರ್ವಹಿಸಲಿವೆ.
ಪ್ರಾಚೀನ ಗ್ರಂಥಗಳ, ಹಸ್ತಪ್ರತಿಗಳ ಸಂಗ್ರಹ, ವಿಶ್ಲೇಷಣೆ ಮತ್ತು ಸಂರಕ್ಷಣೆ ಕಾರ್ಯಗಳು ಗ್ರಂಥಾವಲೋಕನ ವಿಭಾಗದಡಿ ನಡೆಯಲಿವೆ. ಪ್ರಾಚೀನ ಆಚರಣೆ, ಜೀವ ವಿಧಾನಗಳ ವೈಜ್ಞಾನಿಕ ವಿಶ್ಲೇಷಣೆ ಮತ್ತು ಸಮರ್ಥನೆ ಮೂಲಕ ಅಳಿವಿನಂಚು ತಲುಪಿರುವ ಸಂಸ್ಕೃತಿಯ ಬಹಳಷ್ಟು ಆಚಾರ ವಿಚಾರಗಳನ್ನು ಮತ್ತೆ ಪ್ರಚಲಿತಕ್ಕೆ ತರುವಂತೆ ಮಾಡುವ ಕಾರ್ಯಗಳು ಶೋಧಪ್ರಯೋಗ ವಿಭಾಗದ ಮೂಲಕ ನಡೆಯಲಿವೆ ಎಂದು ಸಂಶೋಧನಾ ಖಂಡದ ಶ್ರೀಸಂಯೋಜಕ ಡಾ.ಗುರುರಾಜ್ ಪಡೀಲ್ ವಿವರ ನೀಡಿದ್ದಾರೆ.
ಪುರಾಲೇಖ ವಿಭಾಗದಲ್ಲಿ ಹಸ್ತಪ್ರತಿಗಳು ಮತ್ತು ತಾಳೆಗರಿಯಂಥ ಅಪೂರ್ವ ಹಾಗೂ ಅಮೂಲ್ಯ ಪ್ರಾಚೀನ ಗ್ರಂಥಗಳ ಸಂಗ್ರಹ, ಸಂರಕ್ಷಣೆ ಹಾಗೂ ಇವುಗಳ ಡಿಜಿಟಲೀಕರಣ ಕಾರ್ಯಗಳು ನಡೆಯಲಿವೆ.
ಕರ್ಣಾಟಕ ಬ್ಯಾಂಕ್ ಈ ಯೋಜನೆಗೆ ಈಗಾಗಲೆ 60 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಇಡೀ ಯೋಜನೆಯ ಪ್ರಾಯೋಕತ್ವ ವಹಿಸಿಕೊಳ್ಳುವ ಭರವಸೆ ನೀಡಿದೆ. ಅನಾದಿ ಕಾಲದಿಂದಲೂ ಗುರುಗಳಿಂದ ಶಿಷ್ಯರಿಗೆ ಮೌಖಿಕವಾಗಿಯೇ ಬೋಧನೆಯ ಮೂಲಕವೇ ಉಳಿದುಕೊಂಡು ಬಂದ ಅಪೂರ್ವ ವೇದ, ಪುರಾಣ ಮತ್ತು ಪ್ರಾಚೀನ ಅಂಶಗಳ ದಾಖಲೀಕರಣದ ಮೂಲಕ ಭಾರತದ ಭವ್ಯ ಪರಂಪರೆಯ ಶ್ರೇಷ್ಠ ಅಂಶಗಳನ್ನು ಮುಂದಿನ ಪೀಳಿಗೆಗೆ ನೀಡುವ ಪ್ರಯತ್ನಕ್ಕೆ ಬ್ಯಾಂಕ್ ಕೈಜೋಡಿಸಲಿವೆ ಎಂದು ಬ್ಯಾಂಕಿನ ಉನ್ನತ ಮೂಲಗಳು ಹೇಳಿವೆ.
ಗವ್ಹಾಂರ ಮಠದ ಶ್ರೀ ಪಾಂಡುರಂಗ ಮಹಾರಾಜ್, ವಿವಿವಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಿ.ಡಿ.ಶರ್ಮಾ, ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮ, ಸಂಶೋಧನಾ ಖಂಡದ ಶ್ರೀಸಂಯೋಜಕ ಡಾ.ಗುರುರಾಜ ಪಡೀಲ್, ಡಾ.ರವಿ ಪಾಂಡವಪುರ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಗಣಪತಿ ಭಟ್, ಡಾ.ವರ್ಮುಡಿ ಕುಮಾರಸ್ವಾಮಿ, ವ್ಯವಸ್ಥಾ ಪರಿಷತ್ ಪ್ರಮುಖರಾದ ಮಹೇಶ್ ಚಟ್ನಳ್ಳಿ, ಶಾಂತಾರಾಮ ಹೆಗಡೆ, ಜಿ.ಕೆ.ಹೆಗಡೆ, ಗಣೇಶ ಜಿಡ್ಡಿನಮನೆ, ಸಂತೋಷ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ