ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಎಸ್ಎಸ್ಎಲ್ಸಿ ಅಥವಾ 10 ನೇ ತರಗತಿ ಪರೀಕ್ಷೆಗಳನ್ನು ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ಬಾರ್ಎಂಡ್ಬೆಂಚ್ ವರದಿ ಮಾಡಿವೆ.
ಹೆಚ್ಚಿನ ರಾಜ್ಯಗಳು ಈ ವರ್ಷ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ನಡೆಸದಿರಲು ನಿರ್ಧರಿಸಿದ್ದರೆ, ಕರ್ನಾಟಕವು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮಾತ್ರ ರದ್ದುಗೊಳಿಸಿದೆ ಮತ್ತು ಎಸ್ಎಸ್ಎಲ್ಸಿ ಅಥವಾ 10 ನೇ ತರಗತಿ ಪರೀಕ್ಷೆಗಳನ್ನು ಕಡಿಮೆ ಸ್ವರೂಪದಲ್ಲಿ ನಡೆಸಲು ನಿರ್ಧರಿಸಿದೆ.
ಎಸ್. ವಿ. ಸಿಂಗ್ರೆ ಗೌಡ ಅವರು ಸಲ್ಲಿಸಿದ ಅರ್ಜಿಯಲ್ಲಿ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಂದ ಕಲಿಯುವುದು “ಹೆಚ್ಚು ಅಸಾಧ್ಯ” ಎಂದು ಹೇಳಲಾಗಿದೆ, ವಿಶೇಷವಾಗಿ ಸಂಪನ್ಮೂಲಗಳ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗೆ ಆನ್ಲೈನ್ ಕಲಿಕೆ ಕಷ್ಟವಾಗುತ್ತದೆ ಎಂದು ತಿಳಿಸಲಾಗಿದೆ.
ಅನೇಕ ಶಾಲೆಗಳಲ್ಲಿ ಆನ್ಲೈನ್ ತರಗತಿಗಳನ್ನು ಸೂಕ್ತ ರೀತಿಯಲ್ಲಿ ನಡೆಸಲಾಗಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ತರಗತಿ ನಡೆಸಲು ಸೂಕ್ತ ಸೌಕರ್ಯವಿಲ್ಲ. ಕೆಲ ಪ್ರದೇಶಗಳಲ್ಲಿಯಂತೂ ಒಂದೇ ಒಂದು ತರಗತಿಯನ್ನೂ ನಡೆಸಲಾಗಿಲ್ಲ.
ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದು ಎಲ್ಲ ವಿದ್ಯಾರ್ಥಿಗಳನ್ನೂ ಹತ್ತನೇ ತರಗತಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ತೇರ್ಗಡೆ ಮಾಡಲಾಗಿದೆ. ಇದೇ ರೀತಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನೂ ಕೂಡ ಪೂರ್ವಭಾವಿ ಪರೀಕ್ಷಾ ಅಂಕಗಳು ಹಾಗೂ ಒಂಭತ್ತನೇ ತರಗತಿ ಅಂಕಗಳ ಆಧಾರದಲ್ಲಿ ತೇರ್ಗಡೆ ಮಾಡಲು ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ.
1 ರಿಂದ 18 ವರ್ಷದ ವಯೋಮಾನದವರಿಗೆ ಲಸಿಕೆಯನ್ನು ನೀಡಲಾಗಿಲ್ಲ.
ಹೀಗಾಗಿ ಇಂಥ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ ಮತ್ತು ಪರೀಕ್ಷೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ನಿರ್ದೇಶನಗಳನ್ನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಶನ್ (ಎಸ್ಎಸ್ಎಲ್ಸಿ) ಪರೀಕ್ಷೆಯು ಜುಲೈ 19 ಮತ್ತು ಜುಲೈ 22 ರಂದು ನಡೆಯಲಿದ್ದು, ಅಲ್ಲಿ ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರವೇಶ ಪತ್ರಗಳನ್ನು ಈಗಾಗಲೇ ನೀಡಲಾಗಿದೆ.
ಸಮಗ್ರ ಚರ್ಚೆಯ ನಂತರ ಈ ನಿರ್ಧಾರಕ್ಕೆ ಬಂದಿದ್ದು ಏಕಪಕ್ಷೀಯವಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೂನ್ನಲ್ಲಿ ಹೇಳಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನನ್ನೊಂದಿಗೆ ಪ್ರಾಥಮಿಕ ಚರ್ಚೆಯ ನಂತರ ಎಸ್ಎಸ್ಎಲ್ಸಿ ಪರೀಕ್ಷೆಗಳ ದಿನಾಂಕಗಳನ್ನು ನಿಗದಿಪಡಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ, ಸಮಗ್ರ ಚರ್ಚೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಇದು ಏಕಪಕ್ಷೀಯ ನಿರ್ಧಾರವಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ತಿಂಗಳು ಟ್ವೀಟ್ ಮಾಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ