ನನ್ನ ಜೀವಕ್ಕೆ ತೊಂದರೆಯಾಗುವ ಲಕ್ಷಣ ಕಾಣುತ್ತಿವೆ: ಯೋಗೇಶಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೇಳಿಕೆ

posted in: ರಾಜ್ಯ | 0

ಧಾರವಾಡ: ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಆರೋಪಿ ಬಸವರಾಜ ಮುತ್ತಗಿ ಅವರು ಮತ್ತೆ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ.
ಸಿಬಿಐ ವಿಚಾರಣೆಗಾಗಿ ಧಾರವಾಡದ ಉಪನಗರ ಠಾಣೆ ಒಳಹೋಗುವ ಮೊದಲು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುತ್ತಗಿ, ನಾನು ಕೀಳುಮಟ್ಟದ ರಾಜಕಾರಣ ಮಾಡುವವನಲ್ಲ. ನನ್ನ ಹೋರಾಟದ ಹಾದಿಯನ್ನು ನೀವೆಲ್ಲರೂ ನೋಡಿದ್ದೀರಿ. ರಾಜಕೀಯ ವಿಷಯವಾಗಿ ಯೋಗೀಶಗೌಡ ಕೊಲೆಯಾಗಿದೆ ಎಂಬ ಆಧಾರದ ಮೇಲೆ ಸಿಬಿಐ ವಿಚಾರಣೆ ನಡೆಸುತ್ತಿದೆ. ನನ್ನ ನಂಬಿದ ಹುಡುಗರಿಗೋಸ್ಕರ ಸಾಕಷ್ಟು ವಿಚಾರಗಳನ್ನು ಸಿಬಿಐ ಮುಂದೆ ಹೇಳುತ್ತೇನೆ ಎಂದು ಹೇಳಿದ್ದಾರೆ.
ವಿನಯ್ ಕುಲಕರ್ಣಿ ಪರ ವಕೀಲರು ನನ್ನ ಬೇಲ್ ಕ್ಯಾನ್ಸಲ್ ಮಾಡಿ ಎಂದು ಹೇಳಿದ್ದು ಸರಿಯಲ್ಲ. ಸಹಜವಾಗಿಯೇ ಎಲ್ಲರೂ ಬೇಲ್ ಕೊಡಿ ಎಂದು ಕೇಳುತ್ತಾರೆ. ಅವರ ಮನಸ್ಥಿತಿ ಮತ್ತು ಅವರ ಉದ್ದೇಶ ದಿನದಿಂದ ದಿನಕ್ಕೆ ಗೊತ್ತಾಗುತ್ತಿದೆ. ನಾನು ಇವತ್ತು ಕೂಡ ಹಲವಾರು ವಿಚಾರಗಳನ್ನು ಸಿಬಿಐಗೆ ಹೇಳುತ್ತೇನೆ. ನನ್ನ ಜೀವಕ್ಕೆ ಇಂದಿನಿಂದ ತೊಂದರೆಯಾಗುವ ಲಕ್ಷಣಗಳು ಕಾಣುತ್ತಿವೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೊಬ್ಬರನ್ನು ಬಲಿ ಪಶು ಮಾಡಬೇಡಿ. ನಾನು ಕೂಡ ಅಂಥ ಮನಸ್ಥಿತಿಯವನಲ್ಲ. ಪ್ರಾಮಾಣಿಕವಾಗಿ ಹೋರಾಟ ಮಾಡಿದವನು ನಾನು ಕೂಡ. ಯಾರ ರಾಜಕೀಯ ಉದ್ದೇಶಕ್ಕೆ ಕೊಲೆಯಾಗಿದೆ ಎನ್ನುವುದು ಎಲ್ಲರಿಗೂ ಸಿಬಿಐ ತನಿಖೆಯಲ್ಲಿ ಗೊತ್ತಾಗಲಿದೆ. ಇನ್ನೂ ಸಾಕಷ್ಟು ವಿಷಯಗಳೂ ಬಯಲಿಗೆ ಬರಲಿವೆ. ಈ ಕುರಿತು ನಾನು ಕೂಡ (ಇಂದು) ಶುಕ್ರವಾರ ಸಿಬಿಐ ಮುಂದೆಯೂ ಸಾಕಷ್ಟು ವಿಷಯ ಹೇಳಲಿದ್ದೇನೆ. ಮುಂದೆ ಕೋರ್ಟ್‌ನಲ್ಲಿಯೂ ಹೇಳುತ್ತೇನೆ ಎಂದು ಬಸವರಾಜ ಮುತ್ತಗಿ ಹೇಳಿದ್ದಾರೆ.
ನನ್ನೊಂದಿಗೆ ಬಹಳಷ್ಟು ಬಡ ಹುಡುಗರಿದ್ದಾರೆ. ನಾನು ವಿನಯ ಪರ ಅಥವಾ ವಿರುದ್ಧ ಮಾತಾಡುತ್ತಿಲ್ಲ. ಯಾವುದೇ ಸಂದರ್ಭದಲ್ಲಿಯೂ ನನ್ನ ಹಾಗೂ ಹುಡುಗರನ್ನು ಬಲಿ ಪಶು ಮಾಡಲು ಬಿಡುವುದಿಲ್ಲ. ಇದೇ ಸಂಬಂಧ ಸಿಬಿಐ ಮುಂದೆ ಅನೇಕ ಸತ್ಯವನ್ನು ಹೇಳಲಿದ್ದೇನೆ ಎಂದು ತಿಳಿಸಿದರು.

ಮುಂದುವರೆದ ಡ್ರಿಲ್ಲಿಂಗ್
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಉಪನಗರ ಠಾಣೆಯಲ್ಲಿ ಇಂದು ಕೂಡ ಸಿಬಿಐ ಅಧಿಕಾರಿಗಳು ಹಲವರ ವಿಚಾರಣೆ ನಡೆಸಿದರು. ಗುರುವಾರ ನ್ಯಾಯಾಲಯದಿಂದ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆದಿರುವ ವಿನಯ ಕುಲಕರ್ಣಿ ಅವರ ಆಪ್ತ ಸಹಾಯಕನಾಗಿದ್ದ ಸೋಮಶೇಖರ ನ್ಯಾಮಗೌಡ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ