ಕುಮಾರಸ್ವಾಮಿ-ಸುಮಲತಾ ವಿವಾದ: ರಾಕ್ಲೈನ್ ವೆಂಕಟೇಶ್ ಮನೆ ಎದುರು ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

posted in: ರಾಜ್ಯ | 0

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ನಿವಾಸದ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಗೂ, ಮಂಡ್ಯಕ್ಕೂ ಏನೂ ಸಂಬಂಧ? ವೆಂಕಟೇಶ್ ಕುಮಾರಸ್ವಾಮಿ ಅವರಲ್ಲಿ ಕ್ಷಮೆ ಕೇಳಬೇಕು ಎಂದು ವೆಂಕಟೇಶ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ತೀವ್ರತೆಯನ್ನು ಅರಿತ ಪೊಲೀಸರು ವೆಂಕಟೇಶ್ ನಿವಾಸದ ಬಳಿ ಬ್ಯಾರಿಕೇಡ್ ಅಳವಡಿಸಿದ್ದರು. ಬ್ಯಾರಿಕೇಡ್ ತಳ್ಳಿಕೊಂಡು ಕೆಲವರು ಮನೆಯೊಳಗೆ ನುಗ್ಗಲು ಯತ್ನಿಸಿದರು. ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಪೊಲೀಸರು ಬ್ಯಾರಿಕೇಡ್ ಹಾಕಿ ಎಲ್ಲಾ ರಸ್ತೆಗಳನ್ನು ಮುಚ್ಚಿರುವುದು ರಾಕ್ಲೈನ್ ವೆಂಕಟೇಶ್ ನಿವಾಸದ ಪಕ್ಕದ ಮನೆಯವರ ಆಕ್ರೋಶಕ್ಕೆ ಕಾರಣವಾಗಿದೆ. ಗಾಡಿ ಒಳಗೆ ಹೋಗಲು ಪೊಲೀಸರು ಬಿಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ರಾಜಕೀಯ ವಾಕ್ಸರಕ್ಕಷ್ಟೇ ಸೀಮಿತವಾಗಿದ್ದ ವಿವಾದ ಇದೀಗ ಚಿತ್ರರಂಗಕ್ಕೂ ವ್ಯಾಪಿಸಿದ್ದು, ಎಚ್.ಡಿ.ಕೆ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಶುಕ್ರವಾರ ಸುಮಲತಾ ವಿರುದ್ಧ ಕಿಡಿಕಾರಿದ್ದರು. ದಿವಂಗತ ನಟ ಮಾಜಿ ಸಚಿವ ಅಂಬರೀಶ್ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಅಂಬರೀಶ್ ಹಾಗೂ ಸುಮಲತಾ ಪರವಾಗಿ ಹಿರಿಯ ನಟ ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿಗೆ ಅಂಬರೀಶ್ ಬಗ್ಗೆ ಮಾತನಾಡುವ ಮುನ್ನ ಎಚ್ಚರ ಎಂದಿದ್ದರು. ಆದರೆ, ರಾಕ್ಲೈನ್ ವೆಂಕಟೇಶ್ ಹೇಳಿಕೆ ಕುಮಾರಸ್ವಾಮಿ ಬೆಂಬಲಿಗರನ್ನು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿತ್ತು. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಮನೆಯ ರಸ್ತೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ

ಸುಮಲತಾಗೆ ಯಾರು ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸಂಸದೆ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬಲ್ ಸ್ಟಾರ್ ಇದ್ದಾನೆ. ಅಂಬಿ ಅಭಿಮಾನಿಗಳು ಅವರ ಕುಟುಂಬ ಕಾಯುತ್ತಾರೆ. ಸುಮಲತಾರನ್ನು ಅಡ್ಡ ಮಲಗಿಸಿ ಅಂತ ಕುಮಾರಸ್ವಾಮಿ ಮಾತಾಡಿದ್ರು. ಅಮೇಲೆ ಕಾವಲು ಕಾಯಬೇಕು ಎಂದೆಯಷ್ಟೇ ಅಂದರು. ಕುಮಾರಸ್ವಾಮಿ ತಮ್ಮ ಹೇಳಿಕೆಯನ್ನು ತಿರುಚುತ್ತಾರೆ ಎಂದು ರಾಕ್ಲೈನ್ ಆಕ್ರೋಶ ವ್ಯಕ್ತಪಡಿಸಿದ್ದರು. ರಾಕ್ಲೈನ್ ವೆಂಕಟೇಶ್ ಅವರ ಈ ಹೇಳಿಕೆ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ. ಹೀಗಾಗಿ ತೆನೆ ಕಾರ್ಯಕರ್ತರು ರಾಕ್ಲೈನ್ ಮನೆಗೆ ಮುತ್ತಿಗೆ ಹಾಕಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement