ರಾಷ್ಟ್ರೀಯ ಶಿಕ್ಷಣ ನೀತಿ ಪ್ರಸಕ್ತ ವರ್ಷದಿಂದಲೇ ಜಾರಿ:ಡಾ.ಅಶ್ವತ್ಥನಾರಾಯಣ

posted in: ರಾಜ್ಯ | 0

ಧಾರವಾಡ: ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದರು.
ಸೋಮವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 21ನೇ ಶತಮಾನಕ್ಕೆ ಈ ನೀತಿ ಅವಶ್ಯಕವಾಗಿದೆ. ನಮ್ಮ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬೇಕಾದ ಶಿಕ್ಷಣ, ಜೊತೆಗೆ ಶಿಕ್ಷಣದಲ್ಲಿನ ಕೊರತೆ, ನ್ಯೂನ್ಯತೆಗಳನ್ನು ಸರಿಪಡಿಸುವುದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ ಎಂದರು.
2021ರಿಂದ ಸ್ವ ಇಚ್ಛೆಯಿಂದ ಯಾವ ಶಿಕ್ಷಣ ಸಂಸ್ಥೆಗಳು ಮುಂದೆ ಬರುತ್ತವೆಯೋ ಆ ಸಂಸ್ಥೆಗಳು ಹೊಸ ಶಿಕ್ಷಣ ನೀತಿ ಅಳವಡಿಸಿಕೊಳ್ಳಬಹುದು ಎಂದರು.

ಶಿಕ್ಷಣ ತಜ್ಞರೊಂದಿಗೆ ಡಿಸಿಎಂ ಸಭೆ:
ಪ್ರಸಕ್ತ ಶೈಕ್ಷಣಿಕ ವರ್ಷದಿಂದ (2021-22) ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಸಂಸ್ಥೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಭವನದಲ್ಲಿ ಶಿಕ್ಷಣ ತಜ್ಞರೊಂದಿಗೆ ಸಭೆ ನಡೆಸಿದ ಅವರು, ಎಲ್‌ಎಂಎಸ್ (ಲರ್ನಿಂಗ್ ಮ್ಯಾನೇಜ್ ಸಿಸ್ಟಮ್) ಮತ್ತು ಯೂನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಯುಯುಸಿಎಂಎಸ್) ಗಳನ್ನು ಬಳಸುವ ಮೂಲಕ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎನ್‌ಇಪಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಉತ್ತಮ ಮೂಲಸೌಕರ್ಯ ಹೊಂದಿರುವ ಖಾಸಗಿ ಕಾಲೇಜುಗಳು ಪ್ರಸಕ್ತ ವರ್ಷದಿಂದಲೇ ಎನ್‌ಇಪಿ ಜಾರಿಗೆ ತರಲು ಮುಂದಾಗಬೇಕು. ಇದನ್ನು ಕ್ರಮೇಣವಾಗಿ ಕಾರ್ಯಗತಗೊಳಿಸಲು ಇತರ ಸಂಸ್ಥೆಗಳು ಸಹ ಸಿದ್ಧವಾಗಬೇಕು ಎಂದು ಅವರು ಸಲಹೆ ನೀಡಿದರು.
ಮಾನವ ಬುದ್ಧಿಶಕ್ತಿಯ ವಿವಿಧ ಸಾಮರ್ಥ್ಯಗಳನ್ನು ಸಂಯೋಜಿಸುವ ಉದ್ದೇಶವನ್ನು ಎನ್ಇಪಿ ಹೊಂದಿದೆ. ಭಾರತೀಯ ಸಂಪ್ರದಾಯದ ಬೇರುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಈ ನೀತಿ ಜಾರಿಗೆ ತರಲಾಗಿದೆ. ಆ ಮೂಲಕ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆ ನೀಡುವ ಆಶಯವೂ ಅದರಲ್ಲಿ ಅಡಕವಾಗಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ವಿಧಾನ ಪರಿಷತ್‌ ಸದಸ್ಯ ಪ್ರೊ.ಸಂಕನೂರು, ಕರ್ನಾಟಕ ವಿವಿ ಉಪಕುಲಪತಿ ಪ್ರೊ.ಗುಡಸಿ, ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಡಾ.ತಿಮ್ಮಗೌಡ, ಡಾ.ಈಶ್ವರ್ ಭಟ್ ಮತ್ತು ಹಲವಾರು ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ