ಹುಬ್ಬಳ್ಳಿ-ಧಾರವಾಡ ಸೇರಿ ನಾಲ್ಕು ಪಾಲಿಕೆಗಳಿಗೆ ಶೀಘ್ರವೇ ಚುನಾವಣೆ :ಸಚಿವ ಬೈರತಿ

posted in: ರಾಜ್ಯ | 0

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದ್ದು, ಆದಷ್ಟು ಶೀಘ್ರ ಚುನಾವಣೆ ನಡೆಯಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ಚುನಾವಣೆ ತುರುಸು ಆರಂಭವಾಗಲಿದೆ.
ಸೋಮವಾರ ನಗರದಲ್ಲಿ ಸ್ಮಾರ್ಟ ಸಿಟಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ನಿಂದ ಮಹಾನಗರ ಪಾಲಿಕೆ ಚುನಾವಣೆ ವಿಳಂಬವಾಗಿದೆ. ಚುನಾವಣೆಗೆ ಸಂಬಂಧಿಸಿ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ ವಿಜಯಪುರ ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಗಳ ಚುನಾವಣೆಯನ್ನುಶೀಘ್ರವೇ ನಡೆಸಲು ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ.
ಹೀಗಾಗಿ ಈ ಪಾಲಿಕೆಗಳಿಗೆ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಯಬಹುದು ಎಂಬ ಸುಳಿವು ನೀಡಿದ್ದಾರೆ.
ಹು-ಧಾ ಮಹಾನಗರ ಪಾಲಿಕೆಗೆ ಈಗಾಗಲೇ ವಾರ್ಡ್ ಮೀಸಲಾತಿ ಪ್ರಕಟ ಮಾಡಲಾಗಿದೆ. ಮತದಾರರ ಪಟ್ಟಿಯೂ ಪ್ರಕಟಗೊಂಡಿದೆ. ಚುನಾವಣೆಗೆ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಯಾವುದೇ ಚರ್ಚೆಯಾಗಿಲ್ಲ. ಸಂಪುಟ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿ ಸಹ ಸ್ಪಷ್ಟಪಡಿಸಿದ್ದಾರೆ. ಪಕ್ಷದ ನಾಯಕರಲ್ಲಿ ಭಿನ್ನಮತವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ೩೫ ಕೋಟಿ ವೆಚ್ಚದ ಹಳೇ ಬಸ್ ಬಸ್ ನಿಲ್ದಾಣ ಪುನರ್ ನಿರ್ಮಾಣ ಕಾಮಗಾರಿ ಗೆ ಸಚಿವ ಬೈರತಿ ಬಸವರಾಜ ಚಾಲನೆ ನೀಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ಮೊದಲಾದವರಿದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ