ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ 5 ಸಾವಿರ ಎಕರೆ ಭೂ ಸ್ವಾಧೀನಕ್ಕೆ ನಿರ್ಣಯ: ಶೆಟ್ಟರ್

ಹುಬ್ಬಳ್ಳಿ: ಮಮ್ಮಿಗಟ್ಟಿ ಕೈಗಾರಿಕಾ ವಸಾಹತು ನಂತರ ಧಾರವಾಡ ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು 5 ಸಾವಿರ ಎಕರೆ ಭೂ ಸ್ವಾಧೀನಕ್ಕೆ ನಿರ್ಣಯಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಗೋಕುಲ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಪ್ಯಾಕೇಜ್ 04ರ ಅಡಿ 21.10 ಕೋಟಿ ವೆಚ್ಚದಲ್ಲಿ ಹಾಗೂ ಎಮ್.ಎಸ್.ಎಮ್.ಈ ಯೋಜನೆಯಡಿ 18.40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಒಟ್ಟು 4.19 ಕಿ.ಮೀ ಉದ್ದದ ರಸ್ತೆ ಕಾಮಗಾರಿಯ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಸಹಕಾರಿಯಾಗುವಂತೆ ರಾಜ್ಯ ಸರ್ಕಾರ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ನಿಟ್ಟಿನಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚಿಸಿಲಾಗಿದೆ. ಹುಬ್ಬಳ್ಳಿ ಧಾರವಾಡ ನಗರದಲ್ಲಿ ಏಕಸ್ ಕಂಪನಿ 3524 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮುಂದೆ ಬಂದಿದೆ. ರಾಜ್ಯ ಸರ್ಕಾರದಿಂದ 358 ಎಕರೆ ಜಮೀನನ್ನು ಇಟಗಟ್ಟಿ ಹಾಗೂ ಗಾಮನಗಟ್ಟಿ ಕೈಗಾರಿಕಾ ವಸಹಾತುಗಳಲ್ಲಿ ಕಂಪನಿಗೆ ಮಂಜೂರು ಮಾಡಲಾಗಿದೆ. ಪೊಟ್ಟಣ ತಯಾರಿಕಾ ಉದ್ದಿಮೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಯುಫ್ಲೇಕ್ಸ್ ಕಂಪನಿ 1464 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮಾಡಲಿದೆ. ಧಾರವಾಡ ಮಮ್ಮಿಗಟ್ಟಿ ಬಳಿಗೆ 50 ಎಕರೆ ಜಮೀನು ಕಂಪನಿಗೆ ಮಂಜೂರು ಮಾಡಲಾಗಿದೆ. ರಾಜ್ಯ ಸರ್ಕಾರ ಹುಬ್ಬಳ್ಳಿಯನ್ನು ಎಫ್ಎಂಸಿಜಿ (ಫಾಸ್ಟ್ ಮೂವಿಂಗ್ ಕಂಜ್ಯೂಮರ್ ಗೂಡ್ಸ್) ಕ್ಲಸ್ಟರ್ ಎಂದು ಘೋಷಣೆ ಮಾಡಿದೆ ಎಂದರು.
ಗೋಕುಲ ಕೈಗಾರಿಕ ವಸಹಾತು ನಿರ್ವಹಣೆಗೆ ಟೌನ್ ಶಿಪ್‌ ನಿರ್ಮಾಣ:
ಗೋಕುಲ ಕೈಗಾರಿಕಾ ವಸಹಾತು 500 ಎಕರೆ ವ್ಯಾಪ್ತಿ ವಿಸ್ತೀರ್ಣ ಹೊಂದಿದೆ. ಇದನ್ನು ಟೌನ್ ಶಿಪ್ ಎಂದು ನಗರಾಭಿವೃದ್ಧಿ ಇಲಾಖೆ ವತಿಯಿಂದ ಘೋಷಿಸಿದರೆ ಒಳಿತಾಗುತ್ತದೆ. ಇದರಿಂದ ಸಂಗ್ರಹವಾಗುವ ಕರದಲ್ಲಿ ಶೇ.70 ಭಾಗ ಟೌನ್ ಶಿಪ್ ನಿರ್ವಹಣೆಗೆ ವ್ಯಯಿಸಿ, ಉಳಿದ ಶೇ.30 ರಷ್ಟು ಕರವನ್ನು ಪಾಲಿಕೆ ಸಂದಾಯ ಮಾಡಲಾಗುವುದು. ನಗರಾಭಿವೃದ್ಧಿ ಇಲಾಖೆ ವತಿಯಿಂದ ಸದ್ಯ ವಾಸ ಹಾಗೂ ವ್ಯಾಪಾರ ಸ್ಥಳ ಎಂದು ಗುರುತಿಸಿ ಆಸ್ತಿಕರ ವಸೂಲಿ ಮಾಡಲಾಗುತ್ತಿದೆ. ಇದರಿಂದ ಕೈಗಾರಿಕೆಗಳ ಹೊರೆಯಾಗುತ್ತಿದೆ. ಕೈಗಾರಿಕೆಗಳನ್ನು ಮೂರನೆ ವರ್ಗವಾಗಿ ಪರಿಗಣಿಸಿ ವಾಣಿಜ್ಯ ಬಳಕೆ ಹೊರತಾಗಿ ಆಸ್ತಿಕರ ನಿಗದಿ ಮಾಡಬೇಕು. ಈ ಕುರಿತು ಬೆಂಗಳೂರಿನಲ್ಲಿ ಕೈಗಾರಿಕೆ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಸ್ಮಾರ್ಟ್ ಸಿಟಿ ಅನುಷ್ಠಾನಕ್ಕೆ 336 ಕೋಟಿ ಬಿಡುಗಡೆ:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ.50 ಅನುದಾನ ನೀಡುವುದರ ಮೂಲಕ ರಾಜ್ಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಹುಬ್ಬಳ್ಳಿ -ಧಾರವಾಡ ಸ್ಮಾರ್ಟ್ ಸಿಟಿ ಕಾಮಗಾರಿಗೆ ಇದುವರೆಗೆ 336 ಕೋಟಿ ಬಿಡುಗಡೆ ಮಾಡಲಾಗಿದೆ.‌ ಒಟ್ಟು ಯೋಜನೆ 936 ಕೋಟಿ ರೂಪಾಯಿಗಳಾಗಿದೆ. 110 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ. 660 ಕೋಟಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. 150 ಕೋಟಿ ವೆಚ್ಚದ ಕ್ರೀಡಾ ಸಮುಚ್ಚಯವು ಇದರಲ್ಲಿ ಸೇರಿದೆ ಎಂದ ಅವರು ರವಿನಗರ ಮುಖ್ಯ ರಸ್ತೆ ಹಾಗೂ ಕೈಗಾರಿಕಾ ವಸಹಾತು ಸಂಪರ್ಕಿಸುವ ನಾಲ್ಕು ರಸ್ತೆಗಳನ್ನು ಸ್ಮಾರ್ಟ್ ಸಿಟಿ ಅಡಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ವಿಧಾನ ಪರಿಶತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾಲದ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ ಮಾತನಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕರಾದ ಪ್ರದೀಪ್ ಶೆಟ್ಟರ್, ಅರವಿಂದ್ ಬೆಲ್ಲದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement