ಮಹದಾಯಿ ಯೋಜನೆ, ರೈತ ಸಮಸ್ಯೆಗಳ ಬಗ್ಗೆ ಚರ್ಚಿಸಲು ನರಗುಂದಲ್ಲಿ ಜುಲೈ 16ರಂದು ರೈತರ ಸಭೆ: ಸೊಬರದಮಠ

ನರಗುಂದ: ರೈತಸೇನಾ ಕರ್ನಾಟಕ ನೇತೃತ್ವದಲ್ಲಿ ಜುಲೈ 16ರಂದು (ಶುಕ್ರವಾರ) ನರಗುಂದದ ಹೋರಾಟ ವೇದಿಕೆಯಲ್ಲಿ ಮಹದಾಯಿ ಯೋಜನೆಯ ಬಗ್ಗೆ ಮತ್ತು ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಿನ ಹೋರಾಟ ರೂಪಿಸುವ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ರೈತಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದ್ದಾರೆ.
ಮಲಪ್ರಭಾ ನದಿಗೆ ಮಹದಾಯಿ ನದಿ ಜೋಡಣೆ ಮಾಡಲು ಒತ್ತಾಯಿಸಿ ನರಗುಂದದಲ್ಲಿ ಜುಲೈ 16, 2015 ರಂದು ಹೋರಾಟ ಪ್ರಾರಂಭವಾಗಿ ಆರು ವರ್ಷಗಳನ್ನು ಪೂರೈಸಿ ಏಳನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ ಕಳೆದ ಆರು ವರ್ಷಗಳಲ್ಲಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ನಲವತ್ತು ವರ್ಷಗಳ ಕನಸನ್ನು ನನಸಾಗಿಸಲು ಹತ್ತು ಹಲವು ತರಹದ ಹೋರಾಟಗಳನ್ನು ಮಾಡಿ ಅಂತಿಮವಾಗಿ 14 ಆಗಸ್ಟ್‌ 2018 ರಂದು ನ್ಯಾಯಾಧಿಕರಣದ ಮೂಲಕ ಅಲ್ಪ ಪ್ರಮಾಣದ ನೀರು ನಮ್ಮ ರಾಜ್ಯಕ್ಕೆ ಹಂಚಿಕೆಯಾಗಿ ಮೂರು ವರ್ಷಗಳು ಗತಿಸಿವೆ. ಆದರೂ ಗೋವಾ ರಾಜ್ಯದ ಖ್ಯಾತೆ ಮತ್ತು ಕರ್ನಾಟಕದ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಿನ್ನೆಲೆಯಲ್ಲಿ ಇನ್ನೂ ಕಾಮಗಾರಿ ಪ್ರಾರಂಭವಾಗದಿರುವುದು ದುರ್ದೈವದ ಸಂಗತಿ. ಹೀಗಾಗಿ ಜುಲೈ 16ರಂದು ನರಗುಂದದ ಹೋರಾಟ ವೇದಿಕೆಯಲ್ಲಿ ಮಹದಾಯಿ ಯೋಜನೆಯ ಬಗ್ಗೆ ಮುಂದಿನ ಹೋರಾಟ ರೂಪಿಸುವ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಂದಿನ ಕಾರ್ಯಕ್ರಮದಲ್ಲಿ ನಾಲ್ಕು ಜಿಲ್ಲೆಯ ರೈತಸೇನಾ ಕರ್ನಾಟಕದ ಪದಾಧಿಕಾರಿಗಳು ಮತ್ತು ರೈತರೆಲ್ಲ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡಿರಬೇಕು
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವೀರೇಶ ಸೊಬರದಮಠ ವಿಶೇಷ ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement