ಮಾನ್ಸೂನ್ ಅಧಿವೇಶನದಲ್ಲಿ ಜನಸಂಖ್ಯಾ ನಿಯಂತ್ರಣ, ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಗೆ ಬಿಜೆಪಿ ಸಂಸದರ ಸಿದ್ಧತೆ

ನವದೆಹಲಿ: ಮುಂಬರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಬಿಜೆಪಿ ಸಂಸದರು ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆಯ ಖಾಸಗಿ ಸದಸ್ಯರ ಮಸೂದೆಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾನ್ಸೂನ್ ಅಧಿವೇಶನದಲ್ಲಿ ಬಿಜೆಪಿ ಸಂಸದರು ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆಯ ಖಾಸಗಿ ಸದಸ್ಯರ ಮಸೂದೆಗಳನ್ನು ಪರಿಚಯಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಬಿಜೆಪಿ ಆಡಳಿತವಿರುವ ಮತ್ತು ದೇಶದ ಅತೀ ಹೆಚ್ಚು ಜನಸಂಖ್ಯೆ ಇರುವ ರಾಜ್ಯ ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆ ಕರಡು ಮಸೂದೆ ಜಾರಿಗೆ ಸಿದ್ಧತೆ ನಡೆಸಿದೆ. ಕರಡು ಮಸೂದೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಮಂಡಿಸಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ. ಜುಲೈ 19ರವರೆಗೂ ಇದಕ್ಕೆ ಕಾಲಾವಕಾಶ ನೀಡಲಾಗಿದೆ.
ಖಾಸಗಿ ಸದಸ್ಯರ ಮಸೂದೆ ಸರ್ಕಾರದ ಬೆಂಬಲವಿಲ್ಲದೆ ಕಾನೂನಾಗುವ ಸಾಧ್ಯತೆ ಕಡಿಮೆ.
ಬಿಜೆಪಿ ಸದಸ್ಯರ ಈ ಜನಸಂಖ್ಯೆ ನಿಯಂತ್ರಣ ಮತ್ತು ಏಕರೂಪದ ನಾಗರಿಕ ಸಂಹಿತೆಯ ಪ್ರಸ್ತಾಪಿತ ಶಾಸನಗಳು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಈ ಕುರಿತ ಚರ್ಚೆಗಳು ಆರಂಭವಾಗಿದ್ದು, ಜುಲೈ 24 ರಂದು ಪರಿಚಯಿಸಲು ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ. ಇದನ್ನು ಲಾಟರಿ ವ್ಯವಸ್ಥೆಯ ಮೂಲಕ ನಿರ್ಧರಿಸಲಾಗಿದೆ ಎನ್ನಲಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಮಸೂದೆಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ನೋಟಿಸ್ ನೀಡಿದ್ದಾರೆ.
ಜನಸಂಖ್ಯಾ ನಿಯಂತ್ರಣದ ಪ್ರಸ್ತಾವಿತ ಶಾಸನಗಳು ದಂಪತಿ ಎರಡು ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರೆ, ಅವರನ್ನು ಸರ್ಕಾರಿ ಉದ್ಯೋಗಗಳಿಗೆ ಅನರ್ಹರನ್ನಾಗಿ ಮಾಡುವ ಮೂಲಕ ಮತ್ತು ಸರ್ಕಾರವು ನೀಡುವ ವಿವಿಧ ಸೌಲಭ್ಯಗಳು ಮತ್ತು ಸರಕುಗಳ ಮೇಲಿನ ಸಬ್ಸಿಡಿಗಳಿಗೆ ಕತ್ತರಿ ಹಾಕಲು ಒತ್ತು ನೀಡುತ್ತದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಅಥವಾ ಯಾವುದೇ ರೀತಿಯ ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸಲಾಗುವುದು ಎಂದು ಉತ್ತರ ಪ್ರದೇಶ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಹೇಳಿದೆ.
ಬಿಜೆಪಿ ಆಳ್ವಿಕೆಯ ಮತ್ತೊಂದು ರಾಜ್ಯ ಅಸ್ಸಾಂನಲ್ಲಿ ಇದೇ ರೀತಿಯ ಶಾಸನವು ಚರ್ಚೆಯಲ್ಲಿದೆ. ಮಸೂದೆಯ 5, 6 (2) ಮತ್ತು 7 ಸೆಕ್ಷನ್ ಅಡಿಯಲ್ಲಿ, ಸಾರ್ವಜನಿಕ ಸೇವಕರು ಮತ್ತು ಇತರರನ್ನು ಕುಟುಂಬದಲ್ಲಿ ಒಂದೇ ಮಗುವನ್ನು ಹೊಂದಲು ಪ್ರೇರೇಪಿಸುತ್ತದೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement