ಕಾಸರಕೋಡು ಬಂದರು ವಿಚಾರ: ಸರ್ವಪಕ್ಷಗಳ ಸಭೆ ನಡೆಸಲು ಸಿದ್ಧ

posted in: ರಾಜ್ಯ | 0

ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಕಾಸರಕೋಡ ಬಂದರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಹಕಾರ ಅಗತ್ಯವಿದ್ದು, ಸರ್ವಪಕ್ಷದ ಸಭೆ ನಡೆಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಿದ್ಧ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿವೃದ್ಧಿ ವಿಚಾರದಲ್ಲಿ ಅಹಂಕಾರ ತೋರುವುದಿಲ್ಲ. ಈದಕ್ಕೆ ಎಲ್ಲ ಪಕ್ಷಗಳ ಸಹಕಾರ ಅಗತ್ಯವಿದೆ. ಎಲ್ಲರ ಜೊತೆ ಒಂದು ವೇದಿಕೆಯಲ್ಲಿ ವಿಷಯ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಜೊತೆಗೆ ಮೀನುಗಾರರ ಹಿತಕ್ಕೂ ಬದ್ಧನಿದ್ದೇನೆ ಎಂದು ಹೇಳಿದರು.
ಕಾಸರಕೋಡ ಬಂದರು ವಿಚಾರದಲ್ಲಿ ಮುಖ್ಯಮಂತ್ರಿ ನಿಲುವಿಗೆ ನನ್ನ ಬೆಂಬಲ ಇದೆ. ಅಭಿವೃದ್ದಿ ಕಾರ್ಯಗಳಿಗೆ ಅನೇಕ ಅಡೆತಡೆಗಳು ಬರುತ್ತವೆ. ಎಲ್ಲ ಯೋಜನೆ ಅನುಷ್ಠಾನ ಮಾಡುವಾಗ ಸಾಕಷ್ಟು ವಿರೋಧ ಎದುರಾಗುತ್ತವೆ. ಇದು ಸಹಜ. ಕಾಸರಕೋಡಿನಲ್ಲಿ ಮೀನುಗಾರರ ಬಗ್ಗೆಯೂ ಗಮನ ಹರಿಸಲಾಗುತ್ತದೆ. ಈ ಯೋಜನೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲುದಾರರು. ಈ ಜಿಲ್ಲೆಯಲ್ಲಿ ಎಲ್ಲ ಯೋಜನೆಯಲ್ಲಿ ಸಾಕಷ್ಟು ಜನ ನಿರಾಶ್ರಿತರಾಗಿದ್ದಾರೆ. ಹೀಗಾಗಿ ಮೀನುಗಾರರ ವಿಶ್ವಾಸಗಳಿಸಿ ಯೋಜನೆ ಅನುಷ್ಠಾನ ಮಾಡಲಾಗುವುದು. ಮೀನುಗಾರರ ರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಎಲ್ಲಾ ಪಕ್ಷದ ಸಹಕಾರ ಬಯಸುತ್ತೇನೆ ಎಂದು ಅವರು ಹೇಳಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ