ಕದ್ರಾ ಜಲಾಶಯದಿಂದ ನೀರು ಬಿಡುಗಡೆ: ತೀರದ ನಿವಾಸಿಗಳಿಗೆ ಎಚ್ಚರಿಕೆ

ಕಾರವಾರ: ಕದ್ರಾ ಅಣೆಕಟ್ಟೆಯ ಕಾಳಿನದಿಯ ಹಿನ್ನೀರಿನ ಪ್ರದೇಶದಲ್ಲಿ ಪ್ರದೇಶದಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಬುಧವಾರ ೩ ಕ್ರಸ್ಟ್‌ಗೇಟ್‌ಗಳನ್ನು ತೆರೆದು ೧೦,೦೫೦ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯದ ಗರಿಷ್ಠ ಮಟ್ಟವು ೩೪.೫೦ ಮೀಟರ್‌ಗಳಾಗಿದ್ದು ಮಧ್ಯಾಹ್ನದ ವೇಳೆಗೆ ಜಲಾಶಯ ಮಟ್ಟ ೩೧.೩೮ ಮೀಟರ್‌ಗೆ ತಲುಪಿದೆ. ಇನ್ನು ಜಲಾಶಯದ ಒಳಹರಿವಿನ ಪ್ರಮಾಣ ೨೯,೮೭೬ ಕ್ಯುಸೆಕ್ ಇದೆ. ಈ ನಿಟ್ಟಿನಲ್ಲಿ ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಹಾಗೂ ನೀರಿನ ಮಟ್ಟ ಏರಿಕೆಯಾದ ಬಳಿಕ ಒಮ್ಮೆಗೆ ನೀರು ಬಿಟ್ಟರೆ ಪ್ರವಾಹ ಸ್ಥಿತಿ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೀಡಿರುವ ಸೂಚನೆಯಂತೆ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.

ಸದ್ಯ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಅಲ್ಲದೇ ಕೊಡಸಳ್ಳಿ ಜಲಾಶಯವೂ ಭರ್ತಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಅಲ್ಲಿಂದಲೂ ನೀರು ಹೊರಬಿಡುವ ಸಾಧ್ಯತೆ ಇದೆ.
ಹೀಗಾಗಿ ಸದ್ಯ ಕದ್ರಾ ಅಣೆಕಟ್ಟೆಯಿಂದ ಮೂರು ಕ್ರಸ್ಟ್ ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದ್ದು ಒಳಹರಿವು ಹೆಚ್ಚಾದರೆ ಇನ್ನೂ ಹೆಚ್ಚಿನ ನೀರು ಬಿಡಲಾಗುತ್ತದೆ. ಮಳೆ ಹೆಚ್ಚಾದರೆ ಕದ್ರಾ ಅಣೆಕಟ್ಟೆಯ ಜಲಾಶಯದ ಕೆಳಭಾಗದಲ್ಲಿರುವ ಜನರು ಹಾಗೂ ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಮತ್ತು ದೋಣಿ ಸಂಚಾರ, ಮೀನುಗಾರಿಕೆ ಸೇರಿದಂತೆ ಇತರ ಚಟುವಟಿಕೆಗಳನ್ನು ನಡೆಸಬಾರದು ಎಂದು ಕದ್ರಾ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement