2020 ದೆಹಲಿ ಗಲಭೆ ಪ್ರಕರಣ: ತನಿಖೆ ಆಘಾತಕಾರಿ- ನಿಷ್ಪ್ರಯೋಜಕ ಎಂದ ಕೋರ್ಟ್‌, ಪೊಲೀಸರಿಗೆ 25 ಸಾವಿರ ರೂ. ದಂಡ..!

ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣದ ತನಿಖೆಯೊಂದಕ್ಕೆ ಅಪಕ್ವ ಮತ್ತು ನಿಷ್ಪ್ರಯೋಜಕ ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಈ ಸಂಬಂಧ ದೆಹಲಿ ಪೊಲೀಸರಿಗೆ 25,000 ರೂ. ದಂಡ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿನೋದ್ ಯಾದವ್ ಆದೇಶ ನೀಡಿದ್ದು, ಭಜನ್ಪುರದ ಸ್ಟೇಷನ್ ಹೌಸ್ ಅಧಿಕಾರಿ (ಎಸ್ ಹೆಚ್‌ಒ) ಹಾಗೂ ಅವರ ಉಸ್ತುವಾರಿ ಅಧಿಕಾರಿಗಳು ಶಾಸನ ವಿಹಿತ ಕರ್ತವ್ಯಗಳಲ್ಲಿ ವಿಫಲರಾಗಿದ್ದರಿಂದ ದಂಡದ ಮೊತ್ತವನ್ನು ಪಡೆಯಬೇಕೆಂದು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಗಲಭೆ ಸಂದರ್ಭದಲ್ಲಿ ಗುಂಡೇಟಿನಿಂದ ಎಡಭಾಗದ ಕಣ್ಣು ಕಳೆದುಕೊಂಡಿದ್ದ ಮೊಹಮ್ಮದ್ ನಾಸಿರ್ ಎಂಬವನ ದೂರು ಆಧರಿಸಿ ಎಫ್‌ಐಆರ್ ದಾಖಲಿಸಬೇಕೆಂಬ ಮ್ಯಾಜಿಸ್ಟೀರಿಯಲ್ ಕೋರ್ಟ್ ಆದೇಶವನ್ನು ಪೊಲೀಸರು ಪ್ರಶ್ನಿಸಿದ್ದರು.
ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಹೊಸ ಎಫ್‌ಐಆರ್ ನ ಅಗತ್ಯವಿಲ್ಲವೆಂದೂ, ಮೊಹಮ್ಮದ್ ನಾಸಿರ್ ಎಂಬಾತನ ಮೇಲೆ ಗುಂಡು ಹಾರಿಸಿದ ಆರೋಪ ಎದುರಿಸುತ್ತಿರುವವರು ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಇರದ ಕಾರಣ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲವೆಂದು ತನಿಖಾಧಿಕಾರಿಗಳು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪೊಲೀಸರ ತನಿಖೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು ಪೊಲೀಸ್ ತನಿಖೆಯಲ್ಲಿ ಪರಿಣಾಮಕಾರಿತ್ವ ಹಾಗೂ ನ್ಯಾಯದ ಕೊರತೆ ಕಾಣುತ್ತಿದ್ದು, ತನಿಖೆಯನ್ನು ಅಪಕ್ವ ಮತ್ತು ನಿಷ್ಪ್ರಯೋಜಕ ವಿಧಾನದಲ್ಲಿ ನಡೆಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗದ ಗಮನದಲ್ಲಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದಕ್ಕಾಗಿ ಈ ಆದೇಶದ ಪ್ರತಿಯನ್ನು ದೆಹಲಿಯ ಪೊಲೀಸ್ ಆಯುಕ್ತರಿಗೆ ಕಳುಹಿಸಬೇಕೆಂದೂ ಕೋರ್ಟ್ ಸೂಚನೆ ನೀಡಿದೆ. ಕಾನೂನಿನ ಚೌಕಟ್ಟಿನಲ್ಲಿ ಪರಿಹಾರವನ್ನು ಪಡೆಯುವುದಕ್ಕೆ ಮೊಹಮ್ಮದ್ ನಾಸಿಸ್ ಮುಕ್ತರಾಗಿದ್ದು, ಆತನ ದೂರನ್ನು ಆಧರಿಸಿ ಪ್ರತ್ಯೇಕ ಎಫ್‌ಐಆರ್ ನ್ನು ದಾಖಲಿಸಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿದೆ.
ಅರ್ಜಿದಾರರ ಪರ ವಕೀಲ ಮೆಹ್ಮೂದ್ ಪ್ರಾಚ ವಾದ ಮಂಡಿಸಿ, ನರೇಶ್ ತ್ಯಾಗಿ ಎಂಬಾತ ನಾಸಿರ್ ಮೇಲೆ ಗುಂಡು ಹಾರಿಸಿದ್ದ ಪರಿಣಾಮ ಎಡಭಾಗದ ಕಣ್ಣಿದ ದೃಷ್ಟಿ ಕಳೆದುಕೊಂಡಿದ್ದಾನೆ, ಮನವಿಯ ಹೊರತಾಗಿಯೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಪರಿಣಾಮ ನ್ಯಾಯಾಂಗದ ಮೊರೆ ಬಂದಿದ್ದೇವೆ ಎಂದು ಕೋರ್ಟ್ ಗೆ ಮನವರಿಕೆ ಮಾಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ