ರಾಜ್ಯದಲ್ಲಿ ಮಳೆ ಅಬ್ಬರ, ಉಕ್ಕಿ ಹರಿಯುತ್ತಿರುವ ನದಿಗಳು; ಬೆಳೆನಾಶದ ಆತಂಕದಲ್ಲಿ ರೈತರು

posted in: ರಾಜ್ಯ | 0

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭೂ ಕುಸಿತ, ರಸ್ತೆ ವಾಹನ ಸಂಚಾರ ಸ್ಥಗಿತ ಸೀರಿದಂತೆ ಬಹುತೇಕ ಹಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆರ್ಭಟಕ್ಕೆ ಜನರು ತೊಂದರೆಯಲ್ಲಿದ್ದಾರೆ.

ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡದಲ್ಲಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಬೆಂಗಳೂರು, ಬೆಳಗಾವಿ, ಕೊಪ್ಪಳ, ಮಂಡ್ಯ, ಕೋಲಾರದಲ್ಲೂ ಭಾರೀ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರಂತರ ಮಳೆಯಿಂದಾಗಿ ತುಂಗಾ, ಭದ್ರಾ, ಕುಮಾರಧಾರಾ, ನೇತ್ರಾವತಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ.

ಉತ್ತರ ಕರ್ನಾಟಕದ ಗದಗ, ಹುಬ್ಬಳ್ಳಿ-ಧಾರವಾಡ, ಹಾವೇರಿ, ವಿಜಯಪುರ, ಬಾಗಲಕೋಟ, ಕೊಪ್ಪಳ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರಲ್ಲಿ ಹರ್ಷ ವ್ಯಕ್ತವಾಗಿದೆ.

ಬೆಳಗಾವಿಯಲ್ಲಿ ಸತತ ೬ ದಿನಗಳಿಂದ ವರುಣನ ಅಬ್ಬರ ಹಿನ್ನೆಲೆಯಲ್ಲಿ ರೈತರ ಮುಂಗಾರು ಬೆಳೆಯ ಕನಸು ಕಮರುವ ಮುನ್ಸೂಚನೆ ಕಾಣುತ್ತಿದೆ. ಬೆಳಗಾವಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ. ಬಳ್ಳಾರಿ ನಾಲಾದಿಂದ ಮತ್ತೆ ಅವಾಂತರ ಸೃಷ್ಟಿಯಾಗಿದ್ದು, ಮೂರು ಸಲ ನಾಟಿ ಮಾಡಿದ ಬೆಳೆ ನಾಶವಾಗಿದೆ. ಯಳ್ಳೂರು, ವಡಗಾವಿ, ಹಳೆ ಬೆಳಗಾವಿ, ಬಸವನ ಕುಡಚಿ ಭಾಗದಲ್ಲಿ ಸಮಸ್ಯೆಯಾಗಿದೆ.

ಕೊಡಗಿನಲ್ಲಿ ಅವಾಂತರ ಸೃಷ್ಟಿ:

ಕೊಡಗು ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆ ಹಿನ್ನಲೆ ಸಾವಿರಾರು ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಪರಿಣಾಮ ಕೊಡಗಿನ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಿನ್ನೆ ಮಧ್ಯಾಹ್ನದಿಂದ ಕತ್ತಲೆಯಲ್ಲಿ ಕೊಡಗಿನ ಜನರು ಮುಳುಗಿದ್ದು, ವಿದ್ಯುತ್ ಲೈನ್ ಸರಿಪಡಿಸಲು ಚೆಸ್ಕಾಂ ಸಿಬ್ಬಂದಿ ಹರಸಾಹಸ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ನಿರಂತರ ಮಳೆಗೆ  ಮಡಿಕೇರಿಯ ೨೨ನೇ ವಾರ್ಡಿನಲ್ಲಿದ್ದ ಆರು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಮಳೆಯಿಂದಾಗಿ ನಿನ್ನ ಕಿರುಹೊಳೆಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧನ ಮೃತದೇಹ ಇಂದು ಮಡಿಕೇರಿ ತಾಲ್ಲೂಕಿನ ಆವಂದೂರಿನಲ್ಲಿ ಪತ್ತೆಯಾಗಿದೆ.

ಉಕ್ಕಿ ಹರಿಯುತ್ತಿರುವ ನದಿಗಳು:

ಮಲೆನಾಡಿನಲ್ಲಿ ಮುಂದುವರೆದ ಮಳೆ ಅಬ್ಬರ ಜೋರಾಗಿದ್ದು, ತುಂಗಾ-ಭದ್ರಾ,ಹೇಮಾವತಿ ನದಿ ಒಳಹರಿವು ಹೆಚ್ಚಳವಾಗಿದೆ. ಮಳೆಯಿಂದ ಹೆಬ್ಬಾಳೆ ಸೇತುವೆ ಮುಳುಗಡೆ ಭೀತಿ ಎದುರಾಗಿದೆ ಈ ನಡುವೆ ಭಾರೀ ಮಳೆ ಹಿನ್ನೆಲೆ ರಸ್ತೆ ಮಧ್ಯೆಯೇ ಬಿರುಕು ಬಿಟ್ಟ ಪರಿಣಾಮ ಚಿಕ್ಕಮಗಳೂರು-ಮುತ್ತೋಡಿಗೆ ಸಂಪರ್ಕ ರಸ್ತೆ ಸಂಚಾರ ಸ್ಥಗಿತ ಮಾಡಲಾಗಿದೆ. ಕಳಸ, ಕುದುರೆಮುಖ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಶೃಂಗೇರಿ ತಾಲೂಕಿನ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲೂ ಭಾರೀ ಮಳೆಯಿಂದ ಮಲೆನಾಡಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಪಾಯದ ಮಟ್ಟ ತಲುಪಿದ ನದಿಗಳು:

ಮಳೆಯ ಜೊತೆಗೆ ಬೀಸುತ್ತಿರುವ ಭಾರೀ ಗಾಳಿ ಬಿಸುತ್ತಿರುವ ಹಿನ್ನಲೆ ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ಭಾಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಯಲ್ಲಿ ಹೆಚ್ಚಿದ ನೀರಿನ ಹರಿವು ಹೆಚ್ಚಿದ್ದು, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟಕ್ಕೆ ಏರಲು ಕೆಲವೇ ಮೀಟರ್ ಬಾಕಿ ಇದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಅಪಾಯದ ಮಟ್ಟ ಮೀರಿ ನೇತ್ರಾವತಿ ನದಿ ಹರಿಯಲಿದ್ದು, ಈಗಾಗಲೇ ನದಿ ಪಾತ್ರದ ಜನರನ್ನು ಎಚ್ಚರಿಕೆಯಲ್ಲಿರುವಂತೆ ಸೂಚನೆ ನೀಡಲಾಗಿದೆ. ಪುತ್ತೂರಿನಲ್ಲಿ ಸುರಿದ ಭಾರೀ ಮಳೆಗೆ ಅಪಾಯದ ಅಂಚಿಗೆ ತಲುಪಿದ ಮನೆಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ಯಗಚಿ ಜಲಾಶಯ ಭರ್ತಿ:

ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿಯಗಚಿ ಜಲಾಶಯ ಭರ್ತಿಗೆ ಅರ್ಧ ಅಡಿ ಬಾಕಿ ಇದೆ. ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆ ಡ್ಯಾಂ ನಿಂದ ೨೦೦ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ೨ ಕ್ರಸ್ಟ್ ಗೇಟ್ ಮೂಲಕ ನೀರು ಬಿಡುಗಡೆ ಮಾಡಿದ್ದು, ಅಣೆಕಟ್ಟೆಯ ಕೆಳಭಾಗದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೂಡಲಾಗಿದೆ.

ಹಾಸನ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ-ಸಕಲೇಶಪುರ, ಆಲೂರು, ಹಾಸನ, ಬೇಲೂರು, ಅರಕಲಗೂಡಿನಲ್ಲಿ ವರುಣನ ಅಬ್ಬರ, ಜನಜೀವನ ಸಂಪೂರ್ಣ ಅಸ್ತವ್ಯಸ್ತ-ಮಲೆನಾಡು ಭಾಗದಲ್ಲಿ ಭಾರಿ ಮಳೆ ಹಿನ್ನೆಲೆ-ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆಯಾಗಿದೆ.

ಕಾರವಾರದಲ್ಲಿ ಜನ ಜೀವನ ಅಸ್ತವ್ಯಸ್ತ:

ಕಾರವಾರ ಸೇರಿ ಕರಾವಳಿಯಲ್ಲಿ ಭಾರೀ ಮಳೆ-ಮಲೆನಾಡಿನ ತಾಲೂಕಿನಲ್ಲಿ ಬಿಟ್ಟುಬಿಡದ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಕದ್ರಾ ಜಲಾನಯನ ಪ್ರದೇಶದಲ್ಲೂ ಮಳೆ ಅಬ್ಬರದಿಂದ ಜನರು ಕಂಗಾಲಾಗಿದ್ದಾರೆ. ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ, ರೈತರ ಜಮೀನಿನಲ್ಲಿ ನೀರು ನಿಂತಿದ್ದು, ಬೆಳೆ ಹಾಳಾಗುವ ಭೀತಿಯಲ್ಲಿ ಅನ್ನದಾತರಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement