ಕಾಲೇಜು ಆರಂಭದ ಬಗ್ಗೆ ಇನ್ನೆರಡು ದಿನದಲ್ಲಿ ನಿರ್ಧಾರ: ಡಿಸಿಎಂ ಅಶ್ವತ್ಥ ನಾರಾಯಣ

ಬೆಂಗಳೂರು: ಉನ್ನತ ಶಿಕ್ಷಣ ವಿಭಾಗದ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಾಗಲೇ ಶೇ.75ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗಿದೆ. ಸರಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ತೆಗೆದುಕೊಂಡರೆ ಶೇ.65ರಷ್ಟು ವಿದ್ಯಾರ್ಥಿಗಳು ವ್ಯಾಕ್ಸಿನ್‌ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ನೀಡಲಾಗುವುದು ಎಂದರು.
ಆಫ್‌ಲೈನ್‌ ಕ್ಲಾಸ್‌ ಕಡ್ಡಾಯ ಅಲ್ಲ. ಇಷ್ಟ ಇದ್ದವರು ಲಸಿಕೆ ಪಡೆದು ಬರಬಹುದು, ಇಲ್ಲದವರು ಆನ್‌ಲೈನ್‌ ಕ್ಲಾಸ್‌ನಲ್ಲಿ ಪಾಠ ಕೇಳಬಹುದು. ಆದರೆ, ಹಾಜರಿ ಮಾತ್ರ ಕಡ್ಡಾಯ. ಮೇ ತಿಂಗಳಿಂದಲೇ ಆನ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಜತೆಗೆ, ಸಂಪರ್ಕ ತರಗತಿಗಳು ನಡೆಯುತ್ತಿವೆ ಎಂದರು.
ಅಕ್ಟೋಬರ್‌ ಒಳಗೆ ಪದವಿ, ಅಗಸ್ಟ್‌ ಒಳಗೆ ಡಿಪ್ಲೊಮೊ ಪರೀಕ್ಷೆ ನಡೆಸಲು ಸೂಚನೆ:
ಡಿಪ್ಲೊಮಾ ಮತ್ತು ಪದವಿ ಸೆಮಿಸ್ಟರ್‌ಗಳ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಕ್ರಮವಾಗಿ ಅಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳ ಒಳಗಾಗಿ ಮುಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಎಲ್ಲ ವಿಶ್ವವಿದ್ಯಾಲಯ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.
ಡಿಪ್ಲೊಮಾ ತರಗತಿಗಳ 1, 3 ಮತ್ತು 5ನೇ ಸೆಮಿಸ್ಟರ್‌ಗಳ ಪ್ರಾಯೋಗಿಕ ಪರೀಕ್ಷೆಗಳು ಹಾಗೂ ಬಾಕಿ ಉಳಿದಿರುವ ಥಿಯರಿ ಪರೀಕ್ಷೆಗಳನ್ನು ಅಗಸ್ಟ್‌ ಒಳಗೆ ಮುಗಿಸಬೇಕು ಹಾಗೂ ಪದವಿ ಪರೀಕ್ಷೆಗಳನ್ನು ಅಕ್ಟೋಬರ್‌ ತಿಂಗಳ ಒಳಗಾಗಿ ಮುಗಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲ ಪರೀಕ್ಷೆಗಳಲ್ಲೂ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ. ದೈಹಿಕ ಅಂತರ, ಮಾಸ್ಕ್‌ ಕಡ್ಡಾಯ. ಒಂದು ವೇಳೆ ಯಾವುದೇ ವಿದ್ಯಾರ್ಥಿಗೆ ಕೋವಿಡ್‌ ಸೋಂಕು ತಗುಲಿದ್ದರೆ ಅಂಥವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಹುತೇಕ ಎಲ್ಲ ವಿಶ್ವ ವಿದ್ಯಾಲಯಗಳು ಪರೀಕ್ಷೆಗಳನ್ನು ಮುಗಿಸಿದ್ದು, ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಕರ್ನಾಟಕ ವಿವಿ, ಕಲಬುರಗಿ ವಿವಿ, ಬೆಂಗಳೂರು ವಿವಿಗೆ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಅವರು ಕೂಡ ಈಗ ಪರೀಕ್ಷೆ ಗಳನ್ನು ನಡೆಸಬಹುದು ಎಂದರು.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement