ಕೋವಿಡ್‌-19 ಗಮನದಲ್ಲಿಟ್ಟು ಕನ್ವರ್ ಯಾತ್ರೆ ರದ್ದುಗೊಳಿಸಿದ ಉತ್ತರ ಪ್ರದೇಶ ಸರ್ಕಾರ

ಲಕ್ನೋ:ಕೋವಿಡ್‌-19 ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕನ್ವರ್ ಯಾತ್ರೆಯನ್ನು ರದ್ದುಪಡಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಶನಿವಾರ ಪ್ರಕಟಿಸಿದೆ.
ಯಾತ್ರೆ ನಡೆಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ತಿಳಿಸಿದ ಒಂದು ದಿನದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
ಶನಿವಾರ ುತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರವು ಯಾತ್ರಿಗಳ ಸಂಘಗಳೊಂದಿಗೆ ಚರ್ಚೆ ನಡೆಸಿ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಯಾತ್ರೆಯನ್ನು ಕೈಗೊಳ್ಳದಂತೆ ಮನವಿ ಮಾಡಿದೆ. ಅಖಾದಾ ಪರಿಷತ್, ಸರ್ವೋಚ್ಚ ಮಂಡಳಿ ವೀಕ್ಷಕರು ಕೂಡ ಇದೇ ರೀತಿಯ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳ ಪ್ರಕಾರ, ಯಾತ್ರಿಗಳ ಸಂಘಗಳು ಈ ಆಚರಣೆಗೆ ಒತ್ತಾಯಿಸದಿರಲು ಒಪ್ಪಿಕೊಂಡಿವೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪ್ರತಿವರ್ಷ ಸುಮಾರು ಮೂರು ಕೋಟಿ ಜನರು ಕನ್ವರ್ ಯಾತ್ರೆಯಲ್ಲಿ ಭಾಗವಹಿಸುತ್ತಾರೆ.
ಉತ್ತರಾಖಂಡ ಸರ್ಕಾರವು ಕನ್ವರ್ ಯಾತ್ರೆಯನ್ನು ರದ್ದುಗೊಳಿಸಿದ ನಂತರವೂ, ಉತ್ತರ ಪ್ರದೇಶವು ಯಾತ್ರೆ ನಡೆಸಲು ಹಸಿರು ಸಂಕೇತವನ್ನು ನೀಡಿತ್ತು, ಆದರೆ ಸುಪ್ರೀಂ ಕೋರ್ಟ್ ಸೂಚನೆಯ ನಂತರ ಸರ್ಕಾರ ಶನಿವಾರ ಯಾತ್ರೆಯನ್ನು ರದ್ದುಗೊಳಿಸಿತು.
“ಭಾರತದ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ” ಧಾರ್ಮಿಕ ತೀರ್ಥಯಾತ್ರೆಗೆ ಅವಕಾಶ ನೀಡುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್‌ ರಾಜ್ಯವನ್ನು ಕೇಳಿತ್ತು.
ಕೋವಿಡ್ -19 ರ ಮೂರನೇ ತರಂಗದ ವ್ಯಾಪಕ ಭಯವನ್ನು ಉಲ್ಲೇಖಿಸಿ, ನ್ಯಾಯಮೂರ್ತಿಗಳಾದ ರೋಹಿಂಟನ್ ಎಫ್. ನಾರಿಮನ್ ಮತ್ತು ಬಿ.ಆರ್. ಗವಾಯಿ ಅವರ ನ್ಯಾಯಪೀಠವು ಸೋಮವಾರ ದವರೆಗೆ ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ