ಕರಾವಳಿ ಜಿಲ್ಲೆಗಳು, ದಾವಣೆಗೆರೆ ಸೇರಿ ಹಲವೆಡೆ ಭಾರಿ ಮಳೆ, ಕೆಲವೆಡೆ ಪ್ರವಾಹದ ಸ್ಥಿತಿ

ಬೆಂಗಳೂರು:ರಾಜ್ಯದಲ್ಲಿ ಪುನರ್ವಸು ಮಳೆ ಅಬ್ಬರ ಮುಂದುವರಿದಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಮಳೆ ಆರ್ಭಟ ಇನ್ನೂ ಮೂರ್ನಾಲ್ಕು ದಿನಗಳ ಕಾಲ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡದ ಭಟ್ಕಳ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 66ರ ಸಂಶುದ್ದೀನ್ ವೃತ್ತ, ರಂಗಿನಕಟ್ಟೆ, ಚೌಥನಿ ಗ್ರಾಮದಲ್ಲಿ ಮಳೆಯಿಂದಾಗಿ ನೀರು ನಿಂತಿದೆ. ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ತಗ್ಗು ಮನೆಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದ ಶರಾಬಿ ನದಿ ಉಕ್ಕಿ ಹರಿಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶದ ಅಡಿಕೆ ತೋಟಗಳು ಜಲಾವೃತವಾಗಿದೆ.
ನಾಲ್ಕುದಿನಗಳಿಂದ ದ.ಕ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಾಗುತ್ತಿದ್ದು,ಜೀವ ನದಿ ನೇತ್ರಾವತಿ ಮೈದುಂಬಿ ಹರಿಯುತ್ತಿದೆ..
ಇನ್ನು ಭಾರೀ ಮಳೆಗೆ ಹಲವೆಡೆ ಗುಡ್ಡ ಜರಿತವಾಗಿದೆ.‌ ಭಾರೀ ಮಳೆಗೆ ಗುಡ್ಡ ಜರಿದು ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ, ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಳಗಿನ ವಗ್ಗ ಎಂಬಲ್ಲಿ ನಡೆದಿದೆ. ಬಿ.ಸಿ.ರೋಡ್- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಗೆ ಜರಿದ ಗುಡ್ಡ ಜರಿದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಗುಡ್ಡ ಅಗೆದ ಪರಿಣಾಮ ಜರಿದ ಗುಡ್ಡ ಜರಿದಿದ್ದು, ಗುಡ್ಡ ಜರಿದು ರಸ್ತೆಗೆ ಬಿದ್ದ ಮಣ್ಣು ಜೆಸಿಬಿ ಮೂಲಕ ತೆರವು ಮಾಡಲಾಗಿದೆ..
ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆ..:
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ.‌ ಘಟ್ಟ ಪ್ರದೇಶ ಮತ್ತು ಕುಮಾರಧಾರಾ ಪರ್ವತಗಳಿಂದ ಕುಮಾರಾಧಾರೆಗೆ ನೀರು ಹರಿದು ಬರುತ್ತಿದೆ.
ಭಾರೀ ಮಳೆಗೆ ರೈಲು ಹಳಿ ಮೇಲೆ ಗುಡ್ಡ ಜರಿದಿದ್ದು, ರೈಲು ಸಾಗುತ್ತಿದ್ದಾಗಲೇ ಮಣ್ಣು ಕುಸಿತವಾಗಿದೆ ಎಂದು ವರದಿಯಾಗಿದೆ. ಭಾರೀ ಅನಾಹುತ ತಪ್ಪಿದ್ದು, ಮಂಗಳೂರು-ಬೆಂಗಳೂರು ರೈಲು ಮಾರ್ಗದ ವೀರಮಂಗಲದ ಗಡಿಪಿಲ ಎಂಬಲ್ಲಿ ನಡೆದ ವರದಿಯಾಗಿದೆ. ಗಾಂಧಿಧಾಮ್ – ನಾಗರ್ ಕೊಯಿಲ್ ಏಕ್ಸ್ ಪ್ರೆಸ್ ರೈಲು ಇದಾಗಿದ್ದು, ಮಣ್ಣು ತೆಗೆದ ಬಳಿಕ ಮತ್ತೆ ಸಂಚಾರ ಆರಂಭವಾಗಿದೆ.
ಉಡುಪಿಯ ಕೆಕಾಪು ಮಜೂರು, ಮಠದ ಬೆಟ್ಟು, ಕಲ್ಸಂಕ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಹಾವುಗಳು ಸಹ ತೇಲಿ ಬರುತ್ತಿವೆ. ಕಾಪುವಿನಲ್ಲಿ ಅನಾರೋಗ್ಯಪೀಡಿತ ಮಹಿಳೆಯನ್ನು ಸುರಕ್ಷಿತ ಪ್ರದೇಶಕ್ಕೆ ಜನ ಹೊತ್ತು ಸಾಗಿಸಿದ್ದಾರೆ. ನದಿ ತೊರೆಗಳು ತುಂಬಿ ತುಳುಕುತ್ತಿದ್ದು, ಗದ್ದೆಗಳು ಜಲಾವೃತವಾಗಿವೆ.
ದಾವಣಗೆರೆಯಲ್ಲಿ ರಾತ್ರಿಯಿಡಿ ಸುರಿದ ಮಳೆ ಪ್ರವಾಹ ಸ್ಥಿತಿ ನಿರ್ಮಿಸಿದೆ. ಕೊಂಡಜ್ಜಿ ಬಳಿಯ ಕೆಇಬಿ ಸಬ್ ಸ್ಟೇಷನ್ ಮುಳುಗಡೆ ಹಂತ ತಲುಪಿದೆ. ಸಿಬ್ಬಂದಿ ಹೊರಬರಲು ಆಗದೆ ಅಗ್ನಿಶಾಮಕ ದಳ ಕಾರ್ಯಚರಣೆ ಮಾಡಿ, ಇಬ್ಬರನ್ನು ರಕ್ಷಿಸಿದೆ. ಹರಪನಹಳ್ಳಿ ತಾಲೂಕಿನಲ್ಲಿ ನೂರಾರು ಎಕರೆ ಜಮೀನುಗಳನ್ನು ಮಳೆ ನೀರು ಆವರಿಸಿದೆ. ಅಡಿಕೆ ತೋಟ, ಮೆಕ್ಕೆಜೋಳ, ಚೆಂಡು ಹೂ ಸಂಪೂರ್ಣ ನಾಶವಾಗಿವೆ.
ಚಿಕ್ಕಬಳ್ಳಾಪುರದಲ್ಲಿ ಮಳೆಯಿಂದ ಜಕ್ಕಲಮಡುಗು ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಮೈಲಪ್ಪನಹಳ್ಳಿಯಲ್ಲಿ ತರಕಾರಿ ಹೂ ಬೆಳೆಗಳು ಜಲಾವೃತವಾಗಿವೆ.
ಕಲಬುರಗಿ ಜಿಲ್ಲೆಯ ವಿವಿಧಡೆ ವರುಣನ ಆರ್ಭಟ ಮುಂದುವರೆದಿದ್ದು, ಚಿಂಚೋಳಿಯ ದೇಗಲ್ಮಡಿ ಗ್ರಾಮದ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಬಂದ್ ಆಗಿದೆ.
ತಡರಾತ್ರಿ ಸುರಿದ ಮಳೆಗೆ ಚಿತ್ರದುರ್ಗದ ತಗ್ಗು ಪ್ರದೇಶದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿದೆ. ಗುಮಾಸ್ತ ಕಾಲೋನಿಯಲ್ಲಿರುವ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಚಳ್ಳಕೆರೆಯ ತಪ್ಪಗೊಂಡನಹಳ್ಳಿಯಲ್ಲಿ ಜಮೀನುಗಳಿಗೆ ಮಳೆ ನೀರು ನುಗ್ಗಿದೆ. ಈರುಳ್ಳಿ, ಮೆಕ್ಕೆಜೋಳ, ಟೊಮೆಟೊ ಬೆಳೆ ಮುಳುಗಡೆ ಆಗಿವೆ. ಹಲವು ಚೆಕ್‍ಡ್ಯಾಂಗಳು ಭರ್ತಿ ಆಗಿವೆ. ರಸ್ತೆಗಳಲ್ಲಿ ನೀರು ಹರಿಯುತ್ತಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement