ಕೂಡ್ಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿಗಳಿಗೆ ಗುರುವಂದನೆ

ಬೆಂಗಳೂರು: ಅದ್ವೈತ ಸಿದ್ಧಾಂತದ ಪ್ರತಿಪಾದಕ ಶಂಕರ ಭಗವತ್ಪಾದರ ಸಂದೇಶಗಳು ಸರ್ವಕಾಲಿಕ ಸತ್ಯವಾಗಿವೆ ಎಂದು ಬೆಂಗಳೂರಿನ ಚಾಮರಾಜಪೇಟೆಯ ಅವಿಚ್ಛಿನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ನೂತನ ಪೀಠಾಧಿಪತಿ ಶ್ರೀವಿದ್ಯಾವಿಶ್ವೇಶ್ವರ ಭಾರತೀ ಮಹಾಸ್ವಾಮಿಗಳ ಹೇಳಿದರು.
ಇಂದು (ಮಂಗಳವಾರ) ಶ್ರೀಮಠದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಆದಿ ಜಗದ್ಗರು ಶಂಕರಾಚಾರ್ಯರ ಬರೆದ ಭಾಷ್ಯತ್ರಯಗಳು ಲೋಕಮಾನ್ಯವಾಗಿವೆ. ಅವರು ಜನಸಾಮಾನ್ಯರಿಗೋಸ್ಕರ ಸ್ತೋತ್ರಗಳನ್ನು ಬರೆದು ಜನರನ್ನು ಭಕ್ತಿರಸದಲ್ಲಿ ತೇಲಿಸಿದರು. ಧರ್ಮ ಜಾಗೃತಿಗಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಶಾಂಕರ ತತ್ವ ಪ್ರಸಾರ ಹಾಗೂ ಆತ್ಮಸಾಕ್ಷಾತ್ಕಾರ ಯತಿ ಧರ್ಮದ ಪಾಲನೆಯಾಗಿದೆ ಎಂದು ಹೇಳಿದರು.
ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಆದ್ದರಿಂದ ಜನರು ತಮ್ಮನ್ನು ಆದ್ಯಾತ್ಮದತ್ತ ತೊಡಗಿಸಿಕೊಳ್ಳಬೇಕು ಎಂದು ¸ಸ್ವಾಮೀಜ ಭಕ್ತರಿಗೆ ಕರೆ ನೀಡಿದರು.

ವಾರಣಾಸಿಯ ಸಾಂಗವೇದವಿದ್ಯಾಲಯದ ಪ್ರಧಾನ ಅಧ್ಯಾಪಕರಾದ ಶ್ರೀ ಗಣೇಶ ದ್ರವಿಡ ಶಾಸ್ತ್ರಿ ಮಾತನಾಡಿ, ವೇದಗಳೇ ಭಾರತದ ಆತ್ಮವಾಗಿವೆ. ಪ್ರಪಂಚದ ಸರ್ವ ಜ್ಞಾನವು ಈ ವೇದಗಳಲ್ಲಡಗಿದೆ. ಶ್ರೀಗಳು ಕಿರಿಯ ವಯಸ್ಸಿನಲ್ಲಿಯೇ ಸಂನ್ಯಾಸ ದೀಕ್ಷೆಯನ್ನು ಪಡೆದು ಸತತ 50 ವರ್ಷಗಳ ಕಾಲ ಶ್ರೀಮಠವನ್ನು ಮುನ್ನಡೆಸಲಿದ್ದಾರೆಂದು ಭವಿಷ್ಯ ನುಡಿದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ವಹಿಸಿ ಮಾತನಾಡಿದ ಸಂಕೇಶ್ವರ ಕರವೀರಪೀಠದ ಶ್ರೀ ಜಗದ್ಗುರು ಸಚ್ಚಿದಾನಂದ ಅಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳು ಮಾತನಾಡಿ ಕರವೀರ ಪೀಠ ಹಾಗೂ ಆವಿಚ್ಛಿನ್ನ ಪರಂಪರಾ ಕೂಡ್ಲಿ ಶೃಂಗೇರಿಯ ಶ್ರೀಮಠದ ಅವಿನಾಭಾವ ಸಂಬಂಧವನ್ನು ಸ್ಮರಿಸಿ ಇದು ನಿರಂತರವಾಗಿ ಮುಂದುವರೆಯಲಿದೆ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ರವಿ ದೇಶಪಾಂಡೆ ಶ್ರೀಮಠದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ಶ್ರೀಮಠದ ಹಿಂದಿನ ಸ್ವಾಮಿಗಳವರ ಭಗವದೈಕ್ಯದ ನಂತರ ಶ್ರೀಮಠದ ಉತ್ತರಾಧಿಕಾರಿಗಳ ಆಯ್ಕೆ, ಸಂನ್ಯಾಸ ಸ್ವೀಕಾರ ನೂತನ ಶ್ರೀಗಳ ಪಟ್ಟಾಭಿಷೇಕ ಹಾಗೂ ಗುರುವಂದನಾ ಕಾರ್ಯಕ್ರಮದವರೆಗೆ ನಡೆದ ಸಂಪೂರ್ಣ ಘಟನಾವಳಿಗಳನ್ನು ಶ್ರೀಮಠದ ಭಕ್ತರಿಗೆ ತಿಳಿಸಿದರು.
ಇದೇ ಜುಲೈ 24 ರಿಂದ ನೂತನ ಶ್ರೀಗಳು ಬೆಂಗಳೂರಿನ ಅವಿಚ್ಛಿನ ಪರಂಪರಾ ಕೂಡ್ಲಿ ಶೃಂಗೇರಿ ಮಠದಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಬ್ರಾಹ್ಮಣ ನಿಗಮದ ಆಧ್ಯಕ್ಷರಾದ ಎಸ್ ಎಚ್ ಸಚ್ಚಿದಾನಂದ ಮೂರ್ತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ದೇವನಾಥನ್, ವೇದವಿದ್ವಾಂಸರಾದ ಭಾನುಪ್ರಕಾಶ ಶರ್ಮಾ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದರು.
ವೇದ ಮೂರ್ತಿಗಳಾದ ಶಂಕರಶರ್ಮಾ ಜಂತ್ಲಿ, ಗೌರಿಶಂಕರ ಜೋಶಿ, ಸೋಮನಾಥ ಶಾಸ್ತ್ರಿಗಳು ವೇದಘೋಷ ಮಾಡಿದರು. ಸುರಭಿ ಇನಾಮದಾರ ಗುರುಸ್ತುತಿಯ ನಂತರ ಶ್ರೀಮಠದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ ಸ್ವಾಗತಿಸಿದರು. ಡಾ. ವೇಣಿ ಮಾಧವಶಾಸ್ತ್ರಿಗಳು, ನ್ಯಾಯಚೂಡಾಮಣಿ ರಾಜೇಶ್ವರ ಶಾಸ್ತ್ರಿಗಳು, ಗಂಗಾಧರ ಇನಾಮದಾರ, ಮಠದ ಆಡಳಿತ ಮಂಡಳಿಯ ಸದಸ್ಯರು, ಮಹಿಳಾ ಭಜನಾ ಮಂಡಳಿಯವರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಕಲ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ ಕುಲಕರ್ಣಿ ವಂದಿಸಿದರು. ಡಾ. ಭೀಮಾಶಂಕರ ಜೋಶಿ ನಿರೂಪಿಸಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement