ದೇಶದಲ್ಲಿ ಹಕ್ಕಿಜ್ವರದ ಸಾವಿನ ಮೊದಲ ಪ್ರಕರಣ ವರದಿ: ಹೆಚ್‌5ಎನ್‌1 ವೈರಸ್ಸಿಗೆ 11 ವರ್ಷದ ಬಾಲಕ ಸಾವು

ನವದೆಹಲಿ: ಕೊರೋನಾ 2ನೇ ಅಲೆಯಿಂದ ಈಗಷ್ಟೇ ದೇಶದ ಜನತೆ ಸುಧಾರಿಸಿಕೊಳ್ಳುತ್ತಿದ್ದು, ಈಗ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಸಾವು ಸಂಭವಿಸಿದೆ.
ದೆಹಲಿಯ ಏಮ್ಸ್​ನಲ್ಲಿ ಹಕ್ಕಿ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 11 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದು ಈ ವರ್ಷ ಹಕ್ಕಿ ಜ್ವರದಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ.
ಏಮ್ಸ್​ನ ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದ ಬಾಲಕನಿಗೆ ಕಳೆದ ಕೆಲವು ದಿನಗಳಿಂದಲೂ ಹೆಚ್5ಎನ್1(ಹಕ್ಕಿಜ್ವರ)ಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ.
ಹರ್ಯಾಣದ ಈ ಬಾಲಕನನ್ನು ಅಧಿಕ ಜ್ವರ ಮತ್ತು ಕಫದ ಕಾರಣದಿಂದ 10 ದಿನಗಳ ಹಿಂದೆ ಏಮ್ಸ್’ಗೆ ದಾಖಲಿಸಲಾಗಿತ್ತು. ಮೊದಲು ಬಾಲಕನಿಗೆ ಕೋವಿಡ್-19 ಸೋಂಕು ತಗುಲಿರಬೇಕು ಎಂದು ಪರೀಕ್ಷೆ ನಡೆಸಿದ ವೇಳೆ ವರದಿ ನೆಗೆಟಿವ್ ಎಂದು ಬಂದಿತ್ತು. ನಂತರ ಹಕ್ಕಿಜ್ವರಕ್ಕೆ ಕಾರಣವಾಗುವ ಇನ್‍ಫ್ಲುಯೆಂಜಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.
ಕಳೆದ ಹದಿನೈದು ವರ್ಷಗಳಿಂದ ಭಾರತದಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳುತ್ತಿದ್ದು, ಮುಖ್ಯವಾಗಿ ಕೋಳಿಗಳನ್ನು ಬಾಧಿಸುತ್ತಿದೆ. ಆದಾಗ್ಯೂ ಈ ರೋಗದಿಂದ ಮನುಷ್ಯರು ಮೃತಪಟ್ಟಿರುವ ನಿದರ್ಶನ ವರದಿಯಾಗಿರಲಿಲ್ಲ. ಈಗ ಹಕ್ಕಿ ಜ್ವರದಿಂದ ಬಾಲಕ ಮೃತಪಟ್ಟಿರುವುದು ಸಾರ್ವಜನಿಕ ಆರೋಗ್ಯ ತಜ್ಞರ ಕಳವಳಕ್ಕೆ ಕಾರಣವಾಗಿದೆ.
ಹಕ್ಕಿ ಜ್ವರಕ್ಕೆ ಏವಿಯನ್​ ಇನ್​ಫ್ಲ್ಯೂಯೆಂಜಾ, ಹೆಚ್5ಎನ್1 ಎಂದೂ ಕರೆಯುತ್ತಾರೆ. ಈ ವೈರಸ್​ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಮನುಷ್ಯರಿಗೂ ತಗುಲುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದು ಮನುಷ್ಯನಿಗೆ ತಗುಲುವುದು ತೀರ ಅಪರೂಪ. ಆದರೆ ಹಾಗೊಮ್ಮೆ ಕಾಣಿಸಿಕೊಂಡರೆ ಸಾವಿನ ಸಾಧ್ಯತೆ ಶೇ. 60ರಷ್ಟು ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement