ಯಡಿಯೂರಪ್ಪ ಬೆಂಬಲಕ್ಕೆ ನಿಂತ ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ

posted in: ರಾಜ್ಯ | 0

ಚಿತ್ರದುರ್ಗ: ಸರ್ಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯವಿದ್ದರೆ ಉತ್ತಮ ಆಡಳಿತ ನಡೆಸಲು ಸಾಧ್ಯ ಎಂದು ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ಕೇಂದ್ರ ಸರ್ಕಾರ ಹತೋಟಿ ಸಾಧಿಸುವ ಸಂಚು ಮಾಡಿದರೆ ಎಂಥ ಮುಖ್ಯಮಂತ್ರಿ ಇದ್ದರೂ ಪರಿಪೂರ್ಣ ಆಡಳಿತ ಅಸಾಧ್ಯ ಎಂದು ಹೇಳಿದ್ದಾರೆ.
ಉತ್ತಮ ಆಡಳಿತ ನೀಡಲು ಎಲ್ಲರ ಸಹಕಾರ ಅಗತ್ಯವಿದೆ. ಕೇಂದ್ರ, ರಾಜ್ಯದ ಪ್ರತಿನಿಧಿಗಳು ಮುಖ್ಯಮಂತ್ರಿಗೆ ಸ್ವಾತಂತ್ರ್ಯ ನೀಡಬೇಕು. ಯಾವುದೇ ಪಕ್ಷದ ವ್ಯಕ್ತಿ ಇರಲಿ, ಕನಿಷ್ಠ 5 ವರ್ಷ ಮುಂದುವರಿದರೆ ಒಳ್ಳೆಯ ಕಾರ್ಯ ಸಾಧ್ಯ. ಒಳ್ಳೆಯ ಆಡಳಿತ ನಡೆಸಲು ಅವಕಾಶವನ್ನು ಕಲ್ಪಿಸಬೇಕು. ಆಡಳಿತದಲ್ಲಿ ದೋಷ ಕಂಡುಬಂದರೆ ಆಗ ಕ್ರಮಕೈಗೊಳ್ಳಬೇಕು ಅಂತ ಶ್ರೀಗಳು ಹೇಳಿದ್ದಾರೆ..
ಒಂದು ವರ್ಷ, 2 ವರ್ಷಕ್ಕೆ ಮುಖ್ಯಮಂತ್ರಿಯನ್ನು ಬದಲಿಸಬಾರದು. ಮುಖ್ಯಮಂತ್ರಿ ಬದಲಾವಣೆಯಿಂದ ಅಧಿಕಾರಿಗಳಿಗೆ ಕೆಲಸ ಮಾಡಲು ಸಾಧ್ಯವಾಗುವಿದಿಲ್ಲ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿ. ಹಾಲಿ ಮುಖ್ಯಮಂತ್ರಿಗೆ ಪೂರ್ಣಾವಧಿ ಕೆಲಸ ಮಾಡಲು ಬಿಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಯಶಸ್ವಿಯಾಗಿ ಕೊವಿಡ್ ನಿರ್ವಹಿಸಿದ್ದಾರೆ. ಈ ವೇಳೆ ನೆಪ ಮಾಡಿಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡುವುದು ಒಳ್ಳೆಯ ರಾಜಕಾರಣದ ಸಂಕೇತ ಅಲ್ಲ ಅಂತ ಶ್ರೀಗಳು ಬಿಡುಗಡೆಯಾದ ವಿಡಿಯೋದಲ್ಲಿ ತಿಳಿಸಿದ್ದಾರೆ.
ಈಗಲಾದರೂ ಕೇಂದ್ರ ಸರ್ಕಾರ ಅನಾವಶ್ಯಕ ಮೂಗು ತೂರಿಸುವುದು ಬಿಡಲಿ. ಕರ್ನಾಟಕ ಸರ್ಕಾರಕ್ಕೆ ಹೆಚ್ಚು ಆರ್ಥಿಕ ನೆರವು ನೀಡಬೇಕು. ಆರ್ಥಿಕ ನೆರವು ನೀಡದೆ ಪದೇಪದೇ ಕಿರುಕುಳ ನೀಡಿದರೆ ಉತ್ತಮ ಆಡಳಿತ ಅಸಾಧ್ಯ. ಒಬ್ಬರನ್ನು ತೆಗೆದು ಮತ್ತೊಬ್ಬರನ್ನು ಹಾಕುವುದರಿಂದ ಕರ್ನಾಟಕದಲ್ಲಿ ಅವ್ಯವಸ್ಥೆ ಸೃಷ್ಟಿ ಆಗುತ್ತದೆ. ಅವ್ಯವಸ್ಥೆ ಆಗಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ