ಸಂಸತ್ ಭವನಕ್ಕೆ ರೈತರ ಜಾಥಾ; ಭದ್ರತೆ ಮತ್ತಷ್ಟು ಬಿಗಿಗೊಳಿಸಿದ ದೆಹಲಿ ಪೊಲೀಸರು

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಗುರುವಾರ ಸಂಸತ್ ಭವನಕ್ಕೆ ಜಾಥಾ ಹೋಗುವುದಾಗಿ ಘೋಷಣೆ ಮಾಡಿದ್ದಾರೆ. ದೆಹಲಿ ಪೊಲೀಸರು ಗಡಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.
ರೈತರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಬುಧವಾರ ದೆಹಲಿ ಪೊಲೀಸರು ಒಪ್ಪಿಗೆ ನೀಡಿದ್ದಾರೆ. ಸಂಸತ್ ಮುಂಗಾರು ಅಧಿವೇಶನ ನಡೆಯುತ್ತಿರುವುದರಿಂದ ರೈತರು ಸಂಸತ್ ಭವನದ ತನಕ ಜಾಥಾ ನಡೆಸುವುದಾಗಿ ಹೇಳಿದ್ದಾರೆ.
ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಬಸ್‌ಗಳ ಮೂಲಕ ಪೊಲೀಸ್ ಎಸ್ಕಾರ್ಟ್‌ನಲ್ಲಿ ಜಂತರ್ ಮಂತರ್ ತಲುಪಲಿದ್ದಾರೆ. ಸಿಂಘು ಗಡಿಯಲ್ಲಿ 2500 ದೆಹಲಿ ಪೊಲೀಸರು, 3000 ಪ್ಯಾರಾ ಮಿಲಿಟರಿ ಪಡೆಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜನೆ ಮಾಡಲಾಗಿದೆ.
ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಜೊತೆಗೆ ಗಲಭೆ ನಿಯಂತ್ರಣ ಪಡೆ, ಜಲ ಫಿರಂಗಿ, ಟಿಯರ್ ಗ್ಯಾಸ್‌ಗಳ ವ್ಯವಸ್ಥೆಗಳನ್ನು ಪೊಲೀಸರು ಮಾಡಿಕೊಂಡಿಕೊಂಡಿದ್ದಾರೆ. ಜನವರಿ 26ರಂದು ನಡೆದ ಮಾದರಿ ಗಲಭೆ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ.
ಸಂಸತ್ ಭವನದ ಸಮೀಪ ಪ್ರತಿಭಟನೆ ನಡೆಸಲು ಪೊಲೀಸರು ಅಧಿಕೃತವಾಗಿ ಯಾವುದೇ ಅನುಮತಿಯನ್ನು ನೀಡಿಲ್ಲ. ಕೋವಿಡ್ ಮಾರ್ಗಸೂಚಿ ಹಿನ್ನಲೆಯಲ್ಲಿ ಪ್ರತಿಭಟನೆ ಬಗ್ಗೆ ಮತ್ತೊಮ್ಮೆ ಆಲೋಚನೆ ನಡೆಸುವಂತೆ ಪೊಲೀಸರು ರೈತರಿಗೆ ಕೇಳಿಕೊಂಡಿದ್ದಾರೆ.
ಸಂಸತ್ ಮುಂಗಾರು ಅಧಿವೇಶನ ಪೂರ್ಣಗೊಳ್ಳುವ ತನಕ ಪ್ರತಿದಿನ 200 ರೈತರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ತನಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿ ಪೊಲೀಸರು ಗುರುತಿನ ಚೀಟಿ ವಿತರಣೆ ಮಾಡಿದ ರೈತರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೈತರು ಹೇಳಿದ್ದಾರೆ. ಆದರೆ ಹಿಂಸಾಚಾರ ನಡೆಯದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ