ಜುಲೈ 25ರಂದು ಯಡಿಯೂರಪ್ಪ ಪರ ಸ್ವಾಮೀಜಿಗಳ ಬೃಹತ್‌ ಸಮಾವೇಶ..!

ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಜುಲೈ 25 ಮತ್ತು 26ರಂದು ರಾಜ್ಯ ರಾಜಕೀಯದಲ್ಲಿ ಹಲವಾರು ವಿದ್ಯಮಾನಗಳು ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇನ್ನು ಮೂರು ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಹಲವಾರು ಮಠಾಧೀಶರು ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಹೈಕಮಾಂಡ್ ನಾಯಕರನ್ನು ಒತ್ತಾಯಿಸುತ್ತಿದ್ದಾರೆ.
ಈ ಮಧ್ಯೆ ಬಿಜೆಪಿ ಹೈಕಮಾಂಡ್ ನಾಯಕರ ಗಮನ ಸೆಳೆಯಲು ಜುಲೈ 25ರಂದು ಬೆಂಗಳೂರಿನಲ್ಲಿ ಸ್ವಾಮೀಜಿಗಳು ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಬಿ. ಎಸ್. ಯಡಿಯೂರಪ್ಪ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್ ನಾಯಕರನ್ನು ಒತ್ತಾಯಿಸಲು ಜುಲೈ 25ರಂದು ಬೆಂಗಳೂರಿನಲ್ಲಿ ಸ್ವಾಮೀಜಿಗಳ ಬೃಹತ್ ಸಮಾವೇಶ ನಡಸಲಾಗುತ್ತದೆ” ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಮಾಧ್ಯಮದ ಮುಂದೆ ಹೇಳಿರುವುದನ್ನೇ ಆಹ್ವಾನ ಎಂದು ತಿಳಿದುಕೊಂಡು ಬರಬೇಕು ಎಂದು ಅವರು ಸ್ವಾಮೀಜಿಗಳಿಗೆ ವಿನಂತಿಸಿದ್ದಾರೆ.
ಸಮಾವೇಶ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.
ಸರ್ಕಾರಕ್ಕೆ ಎರಡು ವರ್ಷ ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ ಮೊದಲ ಬಾರಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. “ಇದೇ 26ಕ್ಕೆ ಸರ್ಕಾರ ಎರಡು ವರ್ಷವನ್ನು ಪೂರೈಸುತ್ತದೆ. ಆ ದಿನ ಪಕ್ಷದ ವರಿಷ್ಠರು ಯಾವ ಸಂದೇಶ ಕಳುಹಿಸುತ್ತಾರೋ ಅದನ್ನು ಚಾಚೂ ತಪ್ಪದೇ ಪಾಲಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಅವರ ಈ ಹೇಳಿಕೆ ಬೆನ್ನಲ್ಲೇ ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಜುಲೈ 25ರಂದು ಸಮಾವೇಶ ನಡೆಸಲು ನಿರ್ಧರಿಸಿರುವುದು ಮಹತ್ವ ಪಡೆದಿದೆ. ಅಲ್ಲದೆ, ಯಡಿಯೂರಪ್ಪ ಅವರನ್ನು ಬದಲಾಯಿಸಬಾರದು ಎಂದು ಕೆಲ ಸ್ವಾಮೀಜಿಗಳು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನಾಯಕತ್ವ ಬದಲಾವಣೆ ಸುದ್ದಿಯ ಬೆನ್ನಲ್ಲೇ ಮೊನ್ನೆ (ಬುಧವಾರ) ಯಡಿಯೂರಪ್ಪ ಟ್ವೀಟ್ ಮಾಡಿದ್ದು, “ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಜುಲೈ 25 ಮತ್ತು 26ರಂದು ಏನೆಲ್ಲ ವಿದ್ಯಮಾನಗಳು ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement