ಹೆಚ್ಚಿದ ಮಳೆ ಅಬ್ಬರ: ಪ್ರವಾಹ ಭೀತಿ, ಶಾಲಾ ಕಟ್ಟಡ-ಮನೆಗಳ ಕುಸಿತ, ತೋಟ-ಹೊಲ ಗದ್ದೆಗಳಿಗೆ ನುಗ್ಗಿದ ನೀರು, ಸೇತುವೆಗಳು ಮುಳುಗಡೆ, ಭೂ ಕುಸಿತ

ಬೆಂಗಳೂರು: ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಅನೇಕ ಕಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ನದಿ, ಹಳ್ಳ- ಕೊಳ್ಳಗಳು ಉಕ್ಕಿ ಹರಿಯುತ್ತಿವೆ.ಜಮೀನು, ಹೊಲ, ಗದ್ದೆ, ತೋಟಗಳು ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಲವೆಡೆ ರಸ್ತೆ, ಸೇತುವೆ ಮುಳುಗಡೆಯಾಗಿದೆ. ಕೆಲವು ಕಡೆ ಭೂ ಕುಸಿತಗಳು ಸಂಭವಿಸಿದ ವರದಿಯಾಗಿದೆ. ಹೆದ್ದಾರಿಗಳಲ್ಲಿ ನೀರುಹರಿಯುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಉತ್ತರ ಕನ್ನಡ : ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಅಂಕೋಲಾ ಬಳಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ಅಂಕೋಲದ ಹಲವು ಮನೆಗಳಿಗೆ ನೀರು ನುಗ್ಗಿದೆ. ಐಲ್ಯಾಂಡ್ ಹೋಟೆಲ್, ಪೆಟ್ರೋಲ್ ಪಂಪ್ ಜಲಾವೃತಗೊಂಡಿವೆ. ಹೋಟೆಲ್ ಸಿಬ್ಬಂದಿ ಮಹಡಿ ಏರಿ ಕುಳಿತುಕೊಂಡಿದ್ದಾರೆ.
ಪಾಂಡರಿ ಹಾಗೂ ಕಾನೇರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಾಳಿ ನದಿಯಲ್ಲಿ ಒಳಹರಿವು ಹೆಚ್ಚಾಗಿರುವ ಕಾರಣ ಕದ್ರಾ ಜಲಾಶಯ ಭರ್ತಿಯಾಗಿದೆ. ಎಂಟು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ 40 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಯಿತು. ಅಂಕೋಲಾ ತಾಲ್ಲೂಕಿನ ಗುಳ್ಳಾಪುರ, ಶೇವ್ಕಾರ ಭಾಗದಲ್ಲಿ ಗಂಗಾವಳಿ ನದಿ ಅಬ್ಬರಿಸುತ್ತಿದ್ದು, ಸಮೀಪದ ತೋಟಗಳು ಜಲಾವೃತವಾಗಿವೆ. ಸಮೀಪದ ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಪ್ರವಾಹದ ಆತಂಕ ಎದುರಾಗಿದೆ. ಅಂಕೋಲಾ ತಾಲ್ಲೂಕಿನ ಸುಂಕಸಾಳದಲ್ಲಿ ರಾಷ್ಟ್ರೀಯ ಹೆದ್ದಾರಿ 63 ಜಲಾವೃತವಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ಯಲ್ಲಾಪುರ ತಾಲ್ಲೂಕಿನ ಅರಬೈಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಮೇಲೆ ಅಪಾರ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಇದರಿಂದ ಯಲ್ಲಾಪುರ- ಅಂಕೋಲಾ ನಡುವೆ ಹೆದ್ದಾರಿ ಮೂಲಕ ಸಂಪರ್ಕ ಕಡಿತವಾಗಿದೆ. ಹೊನ್ನಾವರದಲ್ಲಿ ಗಾಳಿ, ಮಳೆಗೆ ಐದು ಮನೆಗಳಿಗೆ ಹಾನಿಯಾ ಗಿದೆ. ಗುಂಡಬಾಳ, ಬಡಗಣಿ ನದಿಗಳು, ಭಾಸ್ಕೇರಿ ಹಳ್ಳ ತುಂಬಿ ಹರಿಯುತ್ತಿದ್ದು, ದಂಡೆಗಳಲ್ಲಿ ಆತಂಕದ ಸ್ಥಿತಿಯಿದೆ.
ಯಲ್ಲಾಪುರ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಕಳಚೆಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿದೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಯಲ್ಲಾಪುರ ಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿವೆ. ಅಂಕೋಲಾ ತಾಲೂಕು ಶಿರೂರ ಗ್ರಾಮದ ಬಳಿ ಸ್ಥಳಾಂತರದ ವೇಳೆ ದೋಣಿ ಮುಳುಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಜೊಯಿಡಾ ತಾಲ್ಲೂಕಿನ ಕುಂಬಾರವಾಡ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಾಗೂ ಮುಂಡಗೋಡ ತಾಲ್ಲೂಕಿನ ಹನುಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದಿವೆ. ಧಾರವಾಡ ತಾಲ್ಲೂಕಿನ ಮುರಕಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಗೋಡೆ ಕುಸಿದಿದೆ.
ಬೆಳಗಾವಿ: ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ ಮುಂದುವರಿದಿದ್ದು, ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ಮತ್ತು ಉಪನದಿಗಳ ಹರಿವಿನಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದೆ. ರಾಜಾ‍ಪುರ ಬ್ಯಾರೇಜ್‌ನಿಂದ 58 ಸಾವಿರ ಕ್ಯುಸೆಕ್ ಮತ್ತು ದೂಧ್‌ಗಂಗಾ ನದಿಯಿಂದ 19,768 ಕ್ಯುಸೆಕ್ ಸೇರಿ 77,768 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ವಾಘವಾಡೆ ಬಳಿ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಏಕಾಏಕಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಳವಾಗಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಗ್ರಾಮಸ್ಥರು ಹಗ್ಗವನ್ನು ಎಸೆದು ಯುವಕನನ್ನು ರಕ್ಷಣೆ ಮಾಡಿದ್ದಾರೆ.

ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರೆದಿದೆ. ಭಾರಿ ಮಳೆಯಿಂದ ವೇದಗಂಗಾ ನದಿ ತುಂಬಿ ಹರಿಯುತ್ತಿದ್ದು ನೀರಿನಲ್ಲಿ ಓಮ್ನಿ ಸಿಲುಕಿಕೊಂಡಿತ್ತು. ಓಮಿನಿ ಮಾಲೀಕರು ಹರಸಾಹಸ ಪಟ್ಟ ಘಟನೆ ನಡೆದಿದೆ. ಯಮಗರಣಿ ಗ್ರಾಮದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ರಸ್ತೆ ಮೇಲೆ ಏಕಾಏಕಿ ವೇದಗಂಗಾ ನದಿ ನೀರು ಹರಿದು ಬಂದಿದೆ. ಈ ವೇಳೆ ಹುನ್ನೂರ ಗ್ರಾಮದಿಂದ ನಿಪ್ಪಾಣಿಗೆ ಹೊರಟಿದ್ದ ಓಮಿನಿ ಕಾರು ಸಿಲುಕಿಕೊಂಡಿದೆ. ಸದ್ಯ ಪೊಲೀಸರು ಹನ್ನೊಂದು ಜನರನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರಿದಿರುವುದರಿಂದ ಅಲ್ಲಿನ‌ ಕೊಯ್ನಾ ಜಲಾಶಯದಿಂದ ಶುಕ್ರವಾರ ಬೆಳಿಗ್ಗೆ 10ಸಾವಿರ ಕ್ಯುಸೆಕ್ ನೀರನ್ನು‌ ಹೊರ ಬಿಡಲಾಗುತ್ತಿದೆ. ಕ್ರಮೇಣ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಅಲ್ಲಿನ‌ ಅಧಿಕಾರಿಗಳು ತಿಳಿಸಿದ್ದಾರೆ. ಕೊಯ್ನಾದಿಂದ ಬಿಡುಗಡೆಯಾಗುವ ನೀರು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ಸೇರುತ್ತದೆ.ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 6 ಕೆಳಮಟ್ಟದ ಕಿರು ಸೇತುವೆಗಳು ಜಲಾವೃತ ಸ್ಥಿತಿಯಲ್ಲಿಯೇ ಇವೆ. ಗುರುವಾರ ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಕ್ಕೋಳ-ಸಿದ್ನಾಳ ಕಿರು ಸೇತುವೆ ಮುಳುಗಡೆಯಾಗಿದೆ.ಶಿವಮೊಗ್ಗ:  ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಕಾರಣ ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ಗುರುವಾರ ನೀರಿನ ಮಟ್ಟ 1796 ಅಡಿಯಷ್ಟು ಇತ್ತು. ಇಂದು(ಶುಕ್ರವಾರ) 1799.15 ಅಡಿಗೆ ಏರಿಕೆಯಾಗಿದೆ. ಲಿಂಗನಮಕ್ಕಿಗೆ 73,431 ಕ್ಯೂಸೆಕ್ ಒಳಹರಿವು ಇದೆ.
ಭದ್ರಾ ಜಲಾಶಯದ ನೀರಿನ ಮಟ್ಟವೂ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ಗುರುವಾರ 167.11 ಅಡಿ ಇತ್ತು. ಇಂದು 171.1 ಅಡಿಗೆ ತಲುಪಿದೆ. 24 ಗಂಟೆ ಅವಧಿಯಲ್ಲಿ 3.99 ಅಡಿಯಷ್ಟು ನೀರಿನ ಸಂಗ್ರಹ ಹೆಚ್ಚಳವಾಗಿದೆ. 39,286 ಕ್ಯೂಸೆಕ್ ಒಳಹರಿವು ಇದೆ.
ಗಾಜನೂರು ತುಂಗಾ ಜಲಾಶಯದಿಂದ ರಾತ್ರಿ ಭಾರೀ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿತ್ತು. ಶುಕ್ರವಾರ ಬೆಳಗ್ಗೆ 48,323 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಹಾಗಾಗಿ ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ.
ದಾವಣಗೆರೆ:ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, 20 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ 9 ಮನೆಗಳಿಗೆ ಹಾನಿಯಾಗಿದ್ದು, ನಲ್ಲೂರು, ಕಬ್ಬಳ, ತಿಪ್ಪಗೊಂಡನಹಳ್ಳಿ, ಆಲೂರು, ಸಂಗಹಳ್ಳಿ, ಹೊಸಹಳ್ಳಿಯಲ್ಲಿ ಮನೆಗಳು ಹಾನಿಯಾಗಿವೆ. ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ಸೇತುವೆ ಕೊಚ್ಚಿಹೋಗಿದ್ದು, ಭಾರಿ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ಕೆಂಗಾಪುರ ಗ್ರಾಮದ ಬಳಿ ಸೇತುವೆ ಜಲಾವೃತಗೊಂಡಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದ ಬಳಿ ಹಳ್ಳದ ನೀರು ನುಗ್ಗಿದೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಹಳೆಯ ಸೇತುವೆ ಜಲಾವೃತಗೊಂಡಿದೆ. ಘಟಪ್ರಭಾ ನದಿ ಅಪಾಯದ ಮಟ್ಟವನ್ನು ಮೀರಿ ಹಡಿಯುತ್ತಿದ್ದು, ಮಿರ್ಜಿ ಗ್ರಾಮದ ಬಳಿಯ ಹಳೆಯ ಸೇತುವೆ ಜಲಾವೃತಗೊಂಡಿದೆ.
ಕಲಬುರ್ಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು, ಚಂದ್ರಂಪಳ್ಳಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಭಾಲ್ಕಿ ತಾಲ್ಲೂಕಿನ ಹೊನ್ನಾಳಿ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ.
ಯಾದಗಿರಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದ ಕಾರಣ, ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರುತ್ತಿದೆ. 1.61 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಬಹುಪಾಲು ಕಡೆ ತೊಗರಿ, ಹೆಸರು, ಉದ್ದು, ಸೋಯಾ ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆ ಹಾನಿ ಭೀತಿ ಎದುರಾಗಿದೆ.
ಗದಗ: ಜಿಲ್ಲೆಯಲ್ಲಿ ರಾತ್ರಿ ಇಡೀ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಭಾರಿ ಮಳೆಯಿಂದಾಗಿ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿತ ಕಂಡಿವೆ. ನರಗುಂದ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಮನೆಗಳು ಕುಸಿದಿವೆ.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುರುವಾರ ಮಳೆಯ ಅಬ್ಬರ ಹೆಚ್ಚಾಗಿತ್ತು. ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿದ್ದು, ಮನೆಗಳಿಗೆ ಹಾನಿಯಾಗಿದೆ. ಅಬ್ಬುಗೂಡಿಗೆ ಬಳಿ ಕಿರು ಸೇತುವೆ ಕುಸಿದು, ಅಬ್ಬುಗೂಡಿಗೆ- ಕಲ್ಲುಗೋಡು ಸಂಪರ್ಕ ಕಡಿತಗೊಂಡಿದೆ. ಅಜ್ಜಂಪುರ ತಾಲ್ಲೂಕಿನ ಅತ್ತಿಘಟ್ಟೆನಲ್ಲಿ 10 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.
ದಕ್ಷಿಣ ಕನ್ನಡ/ಉಡುಪಿ: ಜಿಲ್ಲೆಗಳಲ್ಲಿ ಒಂದು ಮನೆ ಪೂರ್ಣ, ಮೂರು ಮನೆಗಳು ಭಾಗಶಃ ಹಾನಿಯಾಗಿವೆ. ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಉಚ್ಚಿಲ-ಬೆಟ್ಟಂಪಾಡಿ ರಸ್ತೆಗೆ ಹಾನಿಯಾಗಿದೆ. ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗ್ರಾಮದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಹಾಸನ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ ಬಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾಗಿದೆ. ಹೀಗಾಗಿ, ಶಿರಾಡಿ ಘಾಟ್ ರಸ್ತೆಯನ್ನು ನಾಲ್ಕು ದಿನ ಬಂದ್ ಮಾಡಲಾಗಿದ್ದು, ಲಘು ವಾಹನಗಳಿಗೆ ಬಿಸ್ಲೆ ಘಾಟ್‌ ಮತ್ತು ಭಾರಿವಾಹನಗಳಿಗೆ ಹಾನುಬಾಳು, ಮೂಡಿಗೆರೆ, ಚಾರ್ಮಾಡಿ ಘಾಟ್‌ ಹಾಗೂ ಮಡಿಕೇರಿ-ಪುತ್ತೂರು ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ ನದಿ ಮತ್ತೆ ಮೈದುಂಬಿ ಹರಿಯುತ್ತಿದೆ. ಹಾರಂಗಿ ಜಲಾಶಯದ ಒಳಹರಿವು ಏರಿಕೆಯಾಗಿದೆ. ಬಲಮುರಿಯ ಕಿರುಸೇತುವೆ ಮೇಲೆ ಕಾವೇರಿ ನದಿಯ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತವಾಗಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಸಂಪರ್ಕ ಕಡಿತಗೊಂಡಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ಹಾವೇರಿ: ಮಳೆ ಹೆಚ್ಚಾಗಿರುವ ಕಾರಣದಿಂದಾಗಿ ನದಿ ಪಾತ್ರದ ಗ್ರಾಮಗಳ ಜನರಿಗೆ ಡಂಗುರ ಸಾರುವ ಮೂಲಕವಾಗಿ ಎಚ್ಚರಿಕೆಯನ್ನು ನೀಡಲಾಗಿದೆ.
ಡಂಗುರ ಸಾರಿ ನದಿ ಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ಡಂಗುರ ಸಾರಲಾಗಿದೆ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ರಟ್ಟಿಹಳ್ಳಿ ತಾಲೂಕು ಆಡಳಿತ ಸೂಚನೆ ನೀಡಿದೆ.

ಕುಮುದ್ವತಿ ನದಿಗೆ ಭರಪೂರ ನೀರು ಬರುತ್ತಿದೆ. ನದಿಗೆ ನೀರು ಬರುತ್ತಿರೋದರಿಂದ ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು. ನದಿ ಹತ್ತಿರ ಹೋಗಬೇಡಿ ಎಂದು ರಟ್ಟೀಹಳ್ಳಿ ತಾಲೂಕು ಆಡಳಿತದಿಂದ ವಿವಿಧ ಗ್ರಾಮಗಳಲ್ಲಿ ಡಂಗುರ ಸಾರಿಸಿ, ಜನರಿಗೆ ಎಚ್ಚರಿಕೆ ನೀಡಿದ್ದಾರೆ

ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದಾರೆ. ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು, ನದಿಪಾತ್ರದ ಹಳ್ಳಿಗಳಲ್ಲಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಹೆಚ್ಚಿನ ನೆರವು ಬೇಕಾದಲ್ಲಿ ಕೂಡಲೇ ಕರೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement