ಉತ್ತರ ಕರ್ನಾಟಕ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

posted in: ರಾಜ್ಯ | 0

ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಬಾರೀ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ 1 ಲಕ್ಷ 10 ಸಾವಿರ ಕ್ಯೂಸೆಕ್ ಒಳಹರಿವು ಬಂದಿದೆ. ಗೋಕಾಕ ತಾಲೂಕಿನ ಕೊಣ್ಣೂರು ಮಾರುಕಟ್ಟೆ ಸಂಪೂರ್ಣ ಜಲಾವೃತವಾಗಿದೆ. ಗೋಕಾಕ​, ಮೂಡಲಗಿ ತಾಲೂಕಿನ ನದಿಪಾತ್ರದಲ್ಲಿ ನೆರೆ ಭೀತಿ ಉಂಟಾಗಿದ್ದು, ಗೋಕಾಕ ನಗರದ ಲೋಳಸೂರು ಸೇತುವೆ ಜಲಾವೃತಗೊಂಡಿದೆ.
ವೇದಗಂಗಾ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಕಾರಣ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದ ಟೋಲ್ ಬಳಿ 5 ಕಿಲೋ ಮೀಟರ್​ ವರೆಗೂ ವಾಹನಗಳು ನಿಂತಿವೆ.
.ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಅಪಾಯದ ಮಟ್ಟವನ್ನು ಮೀರಿದ್ದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತುಬಚಿ-ಝಂಜರವಾಡ ರಸ್ತೆ ಮಾರ್ಗದ ಸೇತುವೆ ಜಲಾವೃತಗೊಂಡಿದೆ. ಜಿಲ್ಲೆಯ ಮುಧೋಳ ತಾಲೂಕಿನ ೩೬ ಗ್ರಾಮಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ಐತಿಹಾಸಿಕ ದೇವಸ್ಥಾನ ಜಲಾವೃತವಾಗಿದ್ದು, ಆವರಣದಲ್ಲಿ ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ನದಿ ಉಕ್ಕಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ, ಅಪಾರ ಪ್ರಮಾಣದ ಕಬ್ಬು ಬೆಳೆದ ಪ್ರದೇಶದಲ್ಲಿ ನೀರು ನಿಂತಿದೆ.
ಹಾವೇರಿ ಜಿಲ್ಲೆಯಲ್ಲಿ ವರದಾ, ಕುಮುದ್ವತಿ, ಧರ್ಮಾ ನದಿಗಳು ತುಂಬಿ ಹರಿಯುತ್ತಿದ್ದು ರಟ್ಟೀಹಳ್ಳಿ ತಾಲೂಕಿನ ಯಡಗೋಡ , ತಿಪ್ಪಾಯಿಕೊಪ್ಪ, ಕುಡುಪಲಿ, ಎಲಿವಾಳ, ಬಡಸಂಗಾಪುರ, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.ನದಿ ಪಾತ್ರದ ಗ್ರಾಮಗಳ ರೈತರ ಜಮೀನುಗಳಲ್ಲಿನ ಬೆಳೆ ಹಾನಿಯಾಗಿದೆ. ಹತ್ತು ವರ್ಷಗಳ ಬಳಿಕ ಅಂಗರಗಟ್ಟಿ ಗ್ರಾಮದ ಕೆರೆ ತುಂಬಿ ಹರಿದಿದೆ.
ಧಾರವಾಡ: ಹುಬ್ಬಳ್ಳಿಯಲ್ಲಿ ಭಾರಿ ಮಳೆಗೆ 16 ಮನೆಗಳಿಗೆ ಹಾನಿಯಾಗಿದೆ. ಅಳ್ನಾವರ ತಾಲೂಕಿನ ಹುಲಿಕೆರೆಯಲ್ಲಿ ಜಲಾವೃತಗೊಂಡಿದ್ದ ಮನೆಯಲ್ಲಿದ್ದ ವಿಶೇಷ ಚೇತನೆಯೊಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮರಳಿ ಮನೆಗೆ ಸೇರಲು ಜನರು ಭಯ ವ್ಯಕ್ತಪಡಿಸುತ್ತಿದ್ದು, ಕಾಳಜಿ ಕೇಂದ್ರವನ್ನು ತೆರೆಯುವಂತೆ ಸಂತ್ರಸ್ತರು ಆಗ್ರಪಡಿಸಿದ್ದಾರೆ.
ಕೃಷ್ಣಾ ನದಿಗೆ 3.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ದೇವದುರ್ಗ-ಶಹಾಪುರ ನಡುವೆ ಸಂಪರ್ಕ ಕಡಿತಗೊಂಡಿದೆ. ರಾಯಚೂರು-ಕಲಬುರಗಿ ಸಂಪರ್ಕ ಕಡಿತವಾಗಿದೆ
ದಾವಣಗೆರೆ ಜಿಲ್ಲೆಯಲ್ಲಿಯೂ ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ತುಂಗಭದ್ರ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ. ಹರಿಹರದ ಗಂಗಾನಗರದ ಕೆಲ ಮನೆಗಳಿಗೆ ನೀರು ನುಗ್ಗಿದ ಕಾರಣ, 15 ಕುಟುಂಬಗಳನ್ನು ಹರಿಹರದ ಎಪಿಎಂಸಿ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ನ್ಯಾಮತಿ, ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ಎಪ್ಪತ್ತಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ