ಇಂದು ಸಂಜೆ ಯಡಿಯೂರಪ್ಪ ಕೈ ಸೇರಲಿದೆಯೇ ಸಂದೇಶ; ಬಿಜೆಪಿ ಹೈಕಮಾಂಡ್​ ನಿರ್ಧಾರಕ್ಕೆ ಕ್ಷಣಗಣನೆ

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳಿಗೆ ಇಂದು (ಭಾನುವಾರ) ರಾತ್ರಿಯ ಒಳಗೆ ನಾಯಕತ್ವ ಬದಲಾವಣೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕೋ? ಬೇಡವೋ? ಎನ್ನುವ ವಿಚಾರವಾಗಿ ದೆಹಲಿಯ ಹೈಕಮಾಂಡ್ ನಾಯಕರು ಸೂಚನೆ ನೀಡಲಿದ್ದಾರೆ.
ಸದ್ಯ ಗೋವಾ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು (ಭಾನುವಾರ) ಸಂಜೆ 5 ಗಂಟೆ ಸುಮಾರಿಗೆ ದೆಹಲಿಗೆ ವಾಪಾಸ್ಸಾಗಲಿದ್ದಾರೆ. ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ರಾತ್ರಿ ವೇಳೆಗೆ ದೆಹಲಿಗೆ ಆಗಮಿಸಲಿದ್ದಾರೆ. ಮೂರು ದಿನಗಳ ಜಮ್ಮು ಪ್ರವಾಸಕ್ಕೆ ತೆರಳಿದ್ದ ಬಿ.ಎಲ್ ಸಂತೋಷ್ ಕೂಡಾ ಜಮ್ಮು ಪ್ರವಾಸ ಮುಗಿಸಿ ದೆಹಲಿಗೆ ಮರಳಿದ್ದು ಈ ಮೂವರು ನಾಯಕರು ರಾತ್ರಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಮಹತ್ತರ ಬದಲಾವಣೆ ಮಾಡುತ್ತಾರೆಯೇ ಎಂಬ ಅನುಮಾನ ಮೂಡಿವೆ. ಹೀಗಾಗಿ ಇಂದು (ಭಾನುವಾರ) ಸಂಜೆ ನಡೆಯಲಿರುವ ಸಭೆ ಸಹಜವಾಗಿಯೇ ಕುತೂಹಲ ಕೆರಳಿಸಿದ್ದು, ಒಂದುವೇಳೆ ರಾಜೀನಾಮೆ ಕೊಡಲು ಸೂಚಿಸಿದ್ದೇ ಆದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಅಂತಿಮ ತೀರ್ಮಾನವನ್ನೂ ಅದೇ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

ಬದಲಾವಣೆ ಬಗ್ಗೆ ಬೆಳಗಾವಿಯಲ್ಲಿ ಯಡಿಯೂರಪ್ಪಹೇಳಿದ್ದೇನು..?
ಇದೇ ವಿಚಾರವಾಗಿ ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಹೈಕಮಾಂಡ್‌ನಿಂದ ಸಂಜೆ ವೇಳೆಗೆ ಸಂದೇಶ ಬರುತ್ತದೆ. ಹೈಕಮಾಂಡ್‌ನಿಂದ ಸಂದೇಶ ಬಂದರೆ ನಿಮಗೂ ಗೊತ್ತಾಗುತ್ತದೆ. ಆ ಸಂದೇಶ ನೋಡಿಕೊಂಡು ಸೂಕ್ತ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ದಲಿತ ಮುಖ್ಯಮಂತ್ರಿ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ನಿರ್ಧರಿಸುವುದು ನಾನಲ್ಲ, ಅದು ಹೈಕಮಾಂಡ್ ನಿರ್ಧಾರ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮೇಲೆ ನನಗೆ ವಿಶ್ವಾಸವಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿಕೆ ನೀಡುವ ಮೂಲಕ. ಇಂದು ಸಂಜೆಯ ವೇಳೆಗೆ ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಹಿತಿ ಹೊರಬೀಳಬಹುದೆಂಬ ಸುಳಿವು ನೀಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement