ರಾಜ್ಯದಲ್ಲಿ ಇನ್ನೂ ೫ ದಿನ ಮಳೆ ಮುನ್ಸೂಚನೆ: ಇಂದು ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರವಾಗಿದ್ದು, ಕಳೆದ ಹತ್ತು ದಿನಗಳಿಂದ ರಾಜ್ಯದ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆ ಹಾನಿಯನ್ನು ವೀಕ್ಷಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಅವರು ರವಿವಾರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ.

ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿದ್ದಾರೆ. ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು, ಜನರಿಗೆ ಆತಂಕ ಮೂಡಿಸಿದೆ.

ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಇದರಿಂದ ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ಮನೆಗಳು ಕುಸಿದಿವೆ. ಇನ್ನೂ ಕೆಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬೆಳೆಗಳು ನಾಶವಾಗಿವೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ.

ರಾಜ್ಯದಲ್ಲಿ ಮುಂದಿನ ೫ ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜು.೨೫ ಮತ್ತು ೨೬ ರಂದು ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ೪-೫ ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ, ಬೇರೆ ಯಾರಿಗೂ ಕೊಟ್ಟಿಲ್ಲ : ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಹೇಳಿಕೆ

ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭವಾದಾಗಿನಿಂದ ೫೦೧.೬ ಮಿ.ಮೀ ಮಳೆ ಸುರಿದಿದೆ. ಪ್ರತೀ ವರ್ಷ ಸಾಮಾನ್ಯವಾಗಿ ೪೦೩.೮ ಮಿ.ಮೀ ಮಳೆಯಾಗುತ್ತಿತ್ತು. ಈ ಬಾರಿ ಹೆಚ್ಚುವರಿ ಶೇ.೨೪ರಷ್ಟು ಮಳೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ ರಾತ್ರಿ ೮.೩೦ರವರೆಗೆ ೨೪.೪ ಮಿ.ಮೀ. ಮಳೆ ದಾಖಲಾಗಿದೆ. ಹೆಚ್‌ಎಎಲ್ ಏರ್ಪೋರ್ಟ್ ಒಂದರಲ್ಲೇ ೧೬.೬ ಮಿ.ಮೀ ಮಳೆ ಸುರಿದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement