ಕೆಲಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳ: ಮತ್ತೆ ನೈಟ್​, ವೀಕೆಂಡ್​ ಕರ್ಫ್ಯೂ ಜಾರಿ ಸಾಧ್ಯತೆ, ಗಡಿಜಿಲ್ಲೆಗಳ ಡಿಸಿಗಳ ಜೊತೆ ಇಂದು ಸಿಎಂ ಸಭೆ

ಬೆಂಗಳೂರು : ಇಳಿಕೆ ಕಾಣುತ್ತಿದ್ದ ಕೊರೊನಾ ಸೋಂಕು ಇದೀಗ ಕೇರಳ, ಮಹಾರಾಷ್ಟ್ರದಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದು, ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹೀಗಾಗಿ ಕೊರೊನಾ ಸೋಂಕು ತೀವ್ರವಾಗಿ ಹರಡಿದರೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಸಾಧ್ಯತೆ ಕಂಡುಬರುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಶನಿವಾರ) ಗಡಿ ಜಿಲ್ಲೆಗಳು ಹಾಗೂ ಸೋಂಕು ಹೆಚ್ಚುತ್ತಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್‌ ನಡೆಸಲಿದ್ದಾರೆ. ಈ ವೇಳೆಯಲ್ಲಿ ಕೈಗೊಳ್ಳಬಹುದಾದ ಕಠಿಣ ಕ್ರಮಗಳ ಬಗ್ಗೆಯೂ ಚರ್ಚಿಸಲಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಕೆಲ ದಿನಗಳ ಹಿಂದಷ್ಟೇ ಕೊರೊನಾ ನಿಯಮಾವಳಿಗಳನ್ನು ಸಡಿಲಿಸಿ ಸುಸೂತ್ರ ಓಡಾಟಕ್ಕೆ ಅನುವು ನೀಡಲಾಗಿತ್ತಾದರೂ ಈಗ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದ್ದು ಮೂರನೇ ಅಲೆ ಭೀತಿ ಶುರುವಾಗಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 500ರ ಗಡಿದಾಟಿದ ಬೆನ್ನಲ್ಲೇ ಸರ್ಕಾರದ ಹಂತದಲ್ಲಿ ಮಹತ್ವದ ಚರ್ಚೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ.
ಕೊರೊನಾ ಪಾಸಿಟಿವಿಟಿ ದರ ಇಳಿಕೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಲಾಕ್‌ಡೌನ್‌ ತೆರವು ಮಾಡಲಾಗಿತ್ತು. ಆದರೆ ಲಾಕ್‌ಡೌನ್‌ ತೆರವು ಮಾಡುತ್ತಿದ್ದಂತೆಯೇ ರಾಜ್ಯದಲ್ಲಿ ಸೋಂಕಿನ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ. ಪಕ್ದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇರಳದಲ್ಲಿ ಸತತ ನಾಲ್ಕನೇ ದಿನ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರಕಣಗಳು ದಾಖಲಾಗುತ್ತಿದೆ. ಹೀಗಾಗಿ ಕರ್ನಾಟಕ್ಕೆ ಈಗ ಮತ್ತೆ ಹೊರ ರಾಜ್ಯಗಳಿಂದ ಸೋಂಕು ರಾಜ್ಯಕ್ಕೆ ಹರಡುವ ಆತಂಕ ಎದುರಾಗಿದೆ.
ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದಲೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ನಿತ್ಯವೂ 400 ರಿಂದ 500ಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದೆ. ಅಲ್ಲದೇ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಕೊರೊನಾ ಲಾಕ್‌ಡೌನ್‌ ತೆರವಿನ ಬೆನ್ನಲ್ಲೇ ಜನರು ಸಾಮಾಜಿಕ ಅಂತರ, ಮಾಸ್ಕ್‌ ಬಳಕೆಯನ್ನು ಮರೆಯುತ್ತಿದ್ದಾರೆ. ಇದರಿಂದಾಗಿ ಸೋಂಕು ತೀವ್ರವಾಗಿ ಹರಡುತ್ತಿದೆ ಎನ್ನಲಾಗುತ್ತಿದೆ.ಕರ್ನಾಟಕಕ್ಕೆ ಆಗಸ್ಟ್‌ ಮೊದಲ ವಾರ ನಿರ್ಣಾಯಕ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಲೇ ಈಗಲೇ ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಹೇಳುತ್ತಿದ್ದಾರೆ.
ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಅದ್ರಲ್ಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ದರದಲ್ಲಿ ಭಾರಿ ಏರಿಕೆ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿತ್ಯವೂ 300ಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದ್ದು, ಉಡುಪಿಯಲ್ಲಿಯೂ ಸೋಂಕಿನ ಸಂಖ್ಯೆ 100ರ ಗಡಿದಾಟಿದೆ. ಅಲ್ಲದೇ ಸೋಂಕು ಇನ್ನಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಮೈಸೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಗಡಿಗಳಲ್ಲಿ ತಪಾಸಣಾ ಕಾರ್ಯ ನಡೆಸುತ್ತಿದ್ದು, ಕೊರೊನಾ ನೆಗೆಟಿವ್‌ ವರದಿ ಇದ್ದವರಿಗೆ ಮಾತ್ರವೇ ರಾಜ್ಯಕ್ಕೆ ಬರಲು ಅವಕಾಶ ನೀಡಲಾಗುತ್ತಿದೆ. ಆದರೆ ರಾತ್ರಿಯ ವೇಳೆಯಲ್ಲಿ ರಾಜ್ಯಕ್ಕೆ ಆಗಮಿಸುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ರಾಜ್ಯದಲ್ಲಿ ಅಗಸ್ಟ್‌ ಮೂರನೇ ವಾರದಲ್ಲಿ ಕೊರೊನಾ ಮೂರನೇ ಅಲೆ ಉಂಟಾಗುವ ಕುರಿತು ತಜ್ಞರು ಸರಕಾರಕ್ಕೆ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಚಿಂತನೆ ನಡೆಸಿದೆ. ಸೋಂಕು ಹೆಚ್ಚಳವಾದ್ರೆ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಹೇರಿಕೆಯಾಗುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement