ಪ್ರೀತಿ-ಸಾಮಾಜಿಕ ಕಳಕಳಿ-ಭಾವೈಕ್ಯದ ಕವಿ ಎಂ.ಡಿ.ಗೊಗೇರಿ ಸರ್‌ಗೆ ನಾಳೆ ನುಡಿ ನಮನ

(ರವಿವಾರ ದಿನಾಂಕ ೦೧.೦೮.೨೦೨೧ ರಂದು ಮುಂಜಾನೆ ೧೦.೦೦ ಗಂಟೆಗೆ ಶ್ರೀ ಜಗದ್ಗುರು ಮೂರುಸಾವಿರ ಮಠದ ಸಭಾ ಭವನದಲ್ಲಿ ಸಾಹಿತಿಗಳಾದ ಎಂ. ಡಿ. ಗೋಗೇರಿ ಅವರ ನುಡಿನಮನ ಕಾರ್‍ಯಕ್ರಮವಿದ್ದು, ಆ ನಿಮಿತ್ತ ಲೇಖನ. ಎಂ. ಡಿ. ಗೋಗೇರಿ ಅವರ ಜೀವನ , ಸಾಹಿತ್ಯ, ಸಂಸ್ಕೃತಿ, ಹಾಸ್ಯಪ್ರಜ್ಞೆ, ಭಾವೈಕ್ಯತೆ, ಮಕ್ಕಳ ಸಾಹಿತ್ಯ, ಜಾನಪದ ಕ್ಷೇತ್ರ ಮುಂತಾದ ಸಾಧನೆಗಳ ಕುರಿತು ನಾಡಿನ ಹಿರಿಯ ಸಾಹಿತಿಗಳು, ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಾರ್‍ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಲಿದ್ದು, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮಣ್ಣ ಕಂಪಿನ ಹಾಡು ಮತ್ತು ಅವ್ವನ ಪಾದದಡಿಯ ಸ್ವರ್ಗ ಗ್ರಂಥ ಬಿಡುಗಡೆಯಾಗಲಿದ್ದು, ೨೫ಕ್ಕೂ ಹೆಚ್ಚಿನ ಕವಿಗಳು ಕಾವ್ಯ ವಾಚನದೊಂದಿಗೆ ಗಜಲ್ ಜುಗಲಬಂದಿ ಮಾಡಲಿದ್ದಾರೆ. ಸೌಹಾರ್ದ ಸಾಹಿತ್ಯ ವೇದಿಕೆಯ ಅಧ್ಯಕ್ಷ ಆರ್. ಎಂ. ಗೋಗೇರಿ ಉಪಸ್ಥಿತಿಯಲ್ಲಿ ಚಿಂತನ ಮಂಥನ ನಡೆಯಲಿದೆ.)

೮೦ ವರ್ಷ ಬಾಳಿದ್ದ ಮಹಮ್ಮದ್‌ ಅಲಿ ದಸ್ತಗೀರಸಾಹೇಬ ಗೋಗೇರಿ ಅವರು (ಜನನ ೨೧.೦೧.೧೯೪೨, ನಿಧನ ೨೫-೦೪-೨೦೨೧) ನಾಡಿಗೆ ಗೋಗೇರಿ ಸರ್ ಎಂದೇ ಚಿರಪರಿಚರಾಗಿದ್ದರು. ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಂಜೇಂದ್ರಗಡ ಹತ್ತಿರ ಗೋಗೇರಿ ಗ್ರಾಮವರಾದ ಅವರು ತಮ್ಮ ಕಾರ್‍ಯಕ್ಷೇತ್ರವಾಗಿರಿಸಿಕೊಂಡಿದ್ದು ಹುಬ್ಬಳ್ಳಿ ನಗರವನ್ನು. ತಮ್ಮ ಊರಿನ ಹೆಸರನ್ನೇ ಅಡ್ಡ ಹೆಸರಾಗಿಟ್ಟುಕೊಂಡು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ತಮ್ಮ ಬದುಕು ಮತ್ತು ಬರವಣಿಗೆಗಳ ಮೂಲಕ ಬಿಟ್ಟುಹೋಗಿದ್ದಾರೆ.
ತಂದೆ ದಸ್ತಗೀರಸಾಹೇಬ ಅವರು ಬಾರಕೋಲು ತಯಾರಿಸಿ ಮಾರುತ್ತಿದ್ದ ಕ್ಷಣಗಳನ್ನು ಸದಾ ನೆನೆಯುತ್ತಿದ್ದ ಗೋಗೇರಿ ಅವರು ತಾಯಿ ಅಲ್ಲಮ್ಮನಿಂದಾಗಿ ಹಲವಾರು ಸಂಸ್ಕೃತಿಯನ್ನು ಕಲಿತೆ ಎಂದು ಸೌಜನ್ಯದಿಂದ ತಮ್ಮ ಜೀವನದ ವಿಷಯಗಳನ್ನು ಸ್ನೇಹಿತರೊದಿಗೆ ಹಂಚಿಕೊಳ್ಳುತ್ತಿದ್ದರು. ಗೋಗೇರಿ ಕುರಡಗಿ, ಗಜೇಂದ್ರಗಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು ಟಿ.ಸಿ.ಎಚ್.ಅನ್ನು ಹುಬ್ಬಳ್ಳಿಯಲ್ಲಿ ಪಡೆದುಕೊಂಡಿದ್ದರು.
೧೯೬೨ ರಲ್ಲಿ ಕಲಘಟಗಿ ತಾಲ್ಲೂಕಿನ ಮಡಕೆ ಹೊನ್ನಳ್ಳಿಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು, ದಿಂಡೂರು, ಹುಬ್ಬಳ್ಳಿಯ ವಿವಿಧ ಶಾಲೆಗಳಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿ ಶಿಕ್ಷಣ ನೀಡಿದರು. ೩೧.೦೩.೨೦೦೦ ರಂದು ಗೋಪನಕೊಪ್ಪ ಸರಕಾರಿ ಸಂಯುಕ್ತ ಪಿ.ಯು. ಕಾಲೇಜಿನ ಹೈಸ್ಕೂಲ ವಿಭಾಗದಿಂದ ಶಿಕ್ಷಕರಾಗಿ ಸೇವಾ ನಿವೃತ್ತಿ ಹೊಂದಿದರು. ಶಿಕ್ಷಕ ವೃತ್ತಿ ಮಾಡುತ್ತಲೇ ಬಿ.ಎ., ಎಂ.ಎ. ಮತ್ತು ಬಿ.ಇಡಿ. ಪದವಿಗಳನ್ನು ಪಡೆದುಕೊಂಡು,
ಗಜೇಂದ್ರಗಡ ಮಹಾಂತೇಶ್ವರ ಬೋರ್ಡಿಂಗ ಮತ್ತು ಹುಬ್ಬಳ್ಳಿಯ ಮೂರುಸಾವಿರ ಮಠದ ಹಾಸ್ಟೆಲ್‌ ಪ್ರಭಾವದಿಂದ ವಚನ ಸಾಹಿತ್ಯದ ಒಲವು ಮೂಡಿ, ಕಾವ್ಯ ರಚನೆ, ಸಾಹಿತ್ಯದತ್ತ ಆಸಕ್ತಿ ಮೂಡಿತು ಎನ್ನುತ್ತಿದ್ದರು. ೩೮ ವರ್ಷಗಳು ಹೆಚ್ಚಿನ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಗೋಗೇರಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಕರಾಗಿದ್ದರು. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್‍ಯಕ್ರಮಗಳಲ್ಲಿ ಭಾಗವಹಿಸುತ್ತಾ, ಹಿರಿಯ ಮತ್ತು ಕಿರಿಯ ಕವಿಗಳಿಗೆ ಸ್ಪೂರ್ತಿ ತುಂಬುತ್ತಿದ್ದ ಗೋಗೇರಿ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ, ಆದರೆ ತಮ್ಮ ಬರವಣಿಗೆಯ ಮೂಲಕ ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಹತ್ತಿರವಾಗಿದ್ದರು. ಸುಸಂಸ್ಕೃತ ಕವಿಗಳಾದ್ದ ಡಾ. ಡಿ. ಎಸ್. ಕರ್ಕಿ ಮತ್ತು ಸುಪ್ರಭಾತ ಕವಿಗಳಾಗಿದ್ದ ಗಂಗಪ್ಪ ವಾಲಿ ಅವರ ಉತ್ತಾರಾಧಿಕಾರಿಗಳಂತೆ ಸಾಹಿತ್ಯ ಸೇವೆ ಮಾಡುತ್ತಿದ್ದರು.
ಗೋಗೇರಿಯವರ ೩೦ಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. ಅವರ ವೈವಿಧ್ಯಮಯ ಮಕ್ಕಳ ಸಾಹಿತ್ಯ , ಕಾವ್ಯಗಳು, ನಾಟಕಗಳು, ಲಲಿತ ಪ್ರಬಂಧಗಳು, ಲೇಖನಗಳಿಂದ ಓದುಗರಿಗೆ ಹೊಸತನ ನೀಡುತ್ತಿದ್ದರು, ನಗೆ ನವಿಲು, ಸ್ವಂತ ಕವಿತೆ ಓದು, ಭಾವ ಸಂಗಮ, ಎಳ್ಳು-ಬೆಲ್ಲ ಕ್ಯಾಶೆಟ್ಟುಗಳು ಅವರ ಜೀವನದ ಹಾಸ್ಯ ಪ್ರಜ್ಞೆಯನ್ನು ಹೆಚ್ಚಿಸುತ್ತಿದ್ದವು. ಅವರ ಕಾವ್ಯಗಳು ವಿವಿಧ ತರಗತಿಗಳಿಗೆ ಪಠ್ಯವಾಗಿ ಪುಸ್ತಕದಲ್ಲಿ ಬಂದಿವೆ.
೧೯೭೯ ರಿಂದ ೧೯೮೧ ರ ವರೆಗೆ ಹುಬ್ಬಳ್ಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್‍ಯ ನಿರ್ವಹಿಸಿದ್ದಾರಲ್ಲದೆ, ೨ನೇ ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ನಾಡಿನ ಪತ್ರಿಕೆಗಳಲ್ಲಿ ಸಾಹಿತ್ಯ, ಸಂಸ್ಕೃತಿಗಳ ಕುರಿತು ನೂರಾರು ಲೇಖನಗಳು, ಕಾವ್ಯಗಳು ಪ್ರಕಟವಾಗಿವೆ.
ಗೋಗೇರಿ ಅವರು ವಚನಗಳನ್ನು , ಭಕ್ತಿಗೀತೆಗಳನ್ನು, ಅವರ ಚುನಾವಣೆಗೆ ನಿಂತ ನಮ್ಮ ಕಡೇಮನಿ ಹನುಮಂತ ಎಂಬ ಕಾವ್ಯ ಹೆಚ್ಚು ಪ್ರಸಿದ್ಧಿಯಾಗಿತ್ತಲ್ಲದೆ, ಬೇರೆ ಬೇರೆ ಕಾರ್‍ಯಕ್ರಮಗಳ ಅದನ್ನು ಹಾಡಲು ಪ್ರೇಕ್ಷಕರು ಒತ್ತಾಯಿಸುತ್ತಿದ್ದರು.
೧೯೭೫ ರಲ್ಲಿಯೇ ಸಾಹಿತ್ಯ ಸೌಧ ಸ್ಥಾಪಿಸಿ, ಆ ಮೂಲಕ ಗೋಗೇರಿ ಅವರು ಹಲವಾರು ಕಾರ್‍ಯಕ್ರಮಗಳನ್ನು ನೀಡುತ್ತ ಎಲ್ಲರನ್ನು ಸಂಘಟಿಸಿದ್ದರು. ಅವರ ಮಗ ಆರ್. ಎಂ. ಗೋಗೇರಿ ಮತ್ತು ತಂಡ ೦೧.೦೧.೨೦೧೫ ರಿಂದ ಸೌಹಾರ್ದ ಸಾಹಿತ್ಯ ವೇದಿಕೆಯ ಮೂಲಕ ನಿರಂತರ ಕಾರ್‍ಯಕ್ರಮಗಳನ್ನು ಆಯೋಜಿಸುತ್ತಾ, ನಗರದ ಸುತ್ತಮುತ್ತ ಸಾಹಿತ್ಯ ಪರಂಪರೆಯನ್ನು ಮೂಡಿಸುತ್ತಿದ್ದಾರೆ. ಗೋಗೇರಿ ಅವರು ಗೋಕಾಕ ಚಳುವಳಿಯಲ್ಲಿ ಕನ್ನಡ ಹಾಡುಗಳು ಹಾಡುವ ಮೂಲಕ ಸೇರಿದ್ದ ಜನಸಮ್ಮುಖದಲ್ಲಿ ಗಮನ ಸೆಳೆದಿದ್ದರು. ಅವರು ಸಾವಿರಾರು ವಿದ್ಯಾರ್ಥಿಗಳು ನಾಡಿನ ತುಂಬ ಸೇವೆ ಸಲ್ಲಿಸುತ್ತಿದ್ದಾರೆ.
ಗೋಗೇರಿ ಅವರಿಗೆ ಶ್ರೀ ಹರ್ಡೆಕರ ಮಂಜಪ್ಪ, ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆ ರಾಜ್ಯೋತ್ಸವ ಉತ್ತಮ ಶಿಕ್ಷಕ, ತರಳಬಾಳು ಹುಣ್ಣಿಮೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಸಂದಿವೆ. ಹಲವಾರು ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿ, ಗೌರವಿಸಿವೆ.
ಎಂ. ಡಿ. ಗೋಗೇರಿ ಸಮಗ್ರ ಸಾಹಿತ್ಯ ಕುರಿತು ಮೈತ್ರೈಯಣಿ ಗು. ಗದಿಗೆಪ್ಪಗೌಡರ ಅವರು ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ೨೦೦೮ ರಲ್ಲಿ ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಸಂಶೋಧನಾ ವಿದ್ಯಾರ್ಥಿನಿ ಶೀಲಾ.ಶಿ. ದೊಡ್ಡಮನಿ ಅವರು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಿಕಿ ಡಾ. ಮಂದಾಕೀನಿ ಪುರೋಹಿತ ಅವರ ಮಾರ್ಗದರ್ಶನದಲ್ಲಿ ಶ್ರೀ ಮಹಮ್ಮದಲಿ ದಸ್ತಗೀರ ಸಾಹೇಬ ಗೋಗೇರಿ ಅವರ ಕಾರ್‍ಯಗಳಲ್ಲಿ ಸಾಮಾಜಿಕ ಚಿಂತನೆ ಕುರಿತು ೨೦೧೦-೨೦೧೧ ರಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.
ಪತ್ನಿ ರಾಜಬೀ, ಹಿರಿಯ ಪುತ್ರ ವಾಣಿಜ್ಯ ತೆರಿಗೆ ಅಧಿಕಾರಿ ಆರ್. ಎಂ. ಗೋಗೇರಿ, ಕಿರಿಯ ಪುತ್ರ ಜಿ.ಎಂ. ಗೋಗೇರಿ ಹೆಣ್ಣು ಮಕ್ಕಳಾದ ನೂರಜಹಾನ, ಮಹಾನಬಿ, ಹಿರಿಯ ಸೊಸೆ ಶಹನಾಜ್, ಕಿರಿಯ ಸೊಸೆ ಸಲೀಮಾ, ಮೊಮ್ಮಕ್ಕಳಿಂದಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್‍ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಿತ್ತು ಎನ್ನುತ್ತಿದ್ದರು ಗೋಗೇರಿ ಅವರು.
ಗೋಗೇರಿ ಅವರ ಬರವಣಿಗೆಯ ಶೈಲಿ ಕುರಿತು ವಿದ್ವಾಂಸರಾದ ಡಾ. ಹಾ.ಮಾ ನಾಯಕ , ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಎನ್ಕೆ, ಗೋಪಾಲ ವಾಜಪೇಯಿ, ಕಯ್ಯಾರ ಕಿಯ್ಯಣ್ಣರೈ, ಎ. ಎಸ್. ರಾಮಚಂದ್ರರಾವ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಲಿಂಗರಾಜ ರಾ. ಅಂಗಡಿ, ಕಾರ್‍ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಮುಂತಾದವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಮಚಿತ್ತ ಭಾವದ ಕವಿ ಗೋಗೇರಿ ಅವರ ಬರವಣಿಗೆಯಲ್ಲಿ ಪ್ರೀತಿ, ವಿಶ್ವಾಸ, ಸಾರ್ವಜನಿಕ ಕಳಕಳಿ, ಭಾವೈಕ್ಯತೆ, ಅನ್ಯೋನ್ಯತೆ, ರಾಷ್ಟ್ರಭಕ್ತಿ, ಧಾರ್ಮಿಕ ಸಮಾನತೆ, ಸಮನ್ವಯ, ಸೌಜನ್ಯಶೀಲತೆ ಕನಗನೆ ಬಗ್ಗೆ ಅಭಿಮಾನ, ಪರಿಸರ ರಕ್ಷಣೆ ಮುಂತಾದ ವೈವಿದ್ಯಮಯ ವಿಷಯಗಳನ್ನು ಒಳಗೊಂಡಿದ್ದು, ಅವರ ಜೀವನ ಮತ್ತು ಸಾಹಿತ್ಯ ಬಗೆಗೆ ಇನ್ನಷ್ಟು ಪ್ರಚಾರವಾಗಬೇಕಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

-ಬಿ.ಎಸ್. ಮಾಳವಾಡ, ನಿವೃತ್ತಿ ಗ್ರಂಥಪಾಲಕರು ಹುಬ್ಬಳ್ಳಿ

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement