
ದೆಹಲಿ: ರಾಜಕೀಯ ಮತ್ತು ಸಂಸದ ಸ್ಥಾನವನ್ನು ತೊರೆಯುವ ನಿರ್ಧಾರವನ್ನು ಘೋಷಿಸಿದ ಒಂದು ದಿನದ ನಂತರ ಕೇಂದ್ರ ಮಾಜಿ ಸಚಿವ ಬಾಬುಲ್ ಸುಪ್ರಿಯೊ ಈಗ ಮರುಚಿಂತನೆ ನಡೆಸಿದ್ದಾರೆ.
ಬಾಲಿವುಡ್-ಗಾಯಕ-ರಾಜಕಾರಣಿಯಾಗಿರುವ ಬಾಬುಲ್ ಸುಪ್ರಿಯೊ ರಾಜಕೀಯವಾಗಿ ಸಕ್ರಿಯರಾಗದೆ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುವುದನ್ನು ಮುಂದುವರಿಸುವುದಾಗಿ ಸೋಮವಾರ ಹೇಳಿದ್ದಾರೆ. ಸೋಮವಾರ ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ನಂತರ ಸುಪ್ರಿಯೋ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ನಂತರ ಇತ್ತೀಚೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿಯ ಅಸನ್ಸೋಲ್ ಲೋಕಸಭಾ ಸದಸ್ಯ ಭಾನುವಾರ ತಮ್ಮ ನಿರ್ಧಾರವನ್ನು ಘೋಷಿಸುವ ಭಾವನಾತ್ಮಕ ಸಂದೇಶವನ್ನು ತಮ್ಮ ಫೇಸ್ಬುಕ್ ವಾಲ್ನಲ್ಲಿ ಪೋಸ್ಟ್ ಮಾಡಿದ್ದರು.
“ಅಲ್ವಿದಾ (ವಿದಾಯ)…ನಾನು ಹೊರಡುತ್ತಿದ್ದೇನೆ … ನೀವು ಸಮಾಜಸೇವೆ ಮಾಡಲು ಬಯಸಿದರೆ, ನೀವು ರಾಜಕೀಯದಲ್ಲಿ ಇರದೆ ಅದನ್ನು ಮಾಡಬಹುದು …” ಎಂದು ಅವರು ಫೇಸ್ ಬುಕ್ ನಲ್ಲಿ ಬರೆದಿದ್ದರು. ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಕುನಾಲ್ ಘೋಷ್ ಸೇರಿದಂತೆ ರಾಜಕೀಯ ವಿರೋಧಿಗಳು ಸುಪ್ರಿಯೊ ನಡೆಯನ್ನು “ನಾಟಕ” ಎಂದು ಕರೆದಿದ್ದರು.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ. ನಾನು ಬಂಗಲೆಯನ್ನು ತೊರೆಯುತ್ತಿದ್ದೇನೆ. ಕೋಲ್ಕತ್ತಾ ಅಥವಾ ಮುಂಬೈಗೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಅಸೆಂಬ್ಲಿ ಚುನಾವಣೆಯಲ್ಲಿ ದಕ್ಷಿಣ ಕೊಲ್ಕತ್ತಾದ ಟಾಲಿಗಂಜ್ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿದ್ದ ಸುಪ್ರಿಯೊ ಸುಮಾರು 50,000 ಮತಗಳಿಂದ ಸೋತಿದ್ದರು.



ನಿಮ್ಮ ಕಾಮೆಂಟ್ ಬರೆಯಿರಿ