ಕಾರವಾರ: ಕದ್ರಾ ನೆರೆ ಪೀಡಿತ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ

ಕಾರವಾರ:ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾರವಾರ ತಾಲೂಕಿನ ಕದ್ರಾದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.
ಕದ್ರಾ ಜಲಾಶಯದಿಂದ ಸತತ ನೀರು ಬಿಟ್ಟು ಹಾನಿಯಾಗಿರುವ ಸ್ಥಳಗಳಿಗೆ ತೆರಳಿ, ಜನರ ಆಸ್ತಿ-ಪಾಸ್ತಿ, ಮನೆ ಹಾನಿಯಾಗಿರುವುದನ್ನು ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಜನರು ಕದ್ರಾ ಜಲಾಶಯದಿಂದ ಸತತವಾಗಿ ನೀರು ಬಿಟ್ಟಿರುವುದರಿಂದ ತೀವ್ರ ತೊಂದರೆ ಆಗಿದೆ. ಅಲ್ಲದೆ ಈಗ ಇಲ್ಲಿಂದ ಸ್ಥಳಾಂತರಗೊಳ್ಳುವಂತೆ ಸೂಚಿಸುತ್ತಿದ್ದಾರೆ. ಇದರಿಂದ ನಮಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಇಲ್ಲಿಂದ ಎಲ್ಲೂ ಹೋಗುವುದು ಬೇಡ. ಇಲ್ಲಿನ ಸಮಸ್ಯೆ ಹಾಗೂ ಜನರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಸ್ಥಳೀಯರಿಗೆ ಭರವಸೆ ನೀಡಿದರು.
ಕೆಪಿಸಿ ಅಧಿಕಾರಿಗಳಿಗೆ ತರಾಟೆಗೆ:
ಬಳಿಕ ಕದ್ರಾದ ಕೆಪಿಸಿ ಭವನದಲ್ಲಿ ಕೆಪಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಳೆಯ ಸಂದರ್ಭದಲ್ಲಿ ಜಲಾಶಯದಿಂದ ಸತತವಾಗಿ ನೀರು ಬಿಡುಗಡೆ ಮಾಡಿದ್ದರಿಂದ ಜನರಿಗೆ ಸಮಸ್ಯೆಯಾಗಿದೆ. ಅಲ್ಲದೆ ನೀರು ಬಿಡುವ ಪೂರ್ವದಲ್ಲಿ ಜನರಿಗೆ ನೋಟಿಸ್ ನೀಡಿಲ್ಲ ಎನ್ನುವ ಮಾಹಿತಿ ಇದೆ. ಒಂದೇ ಸಮನೆ ನೀರು ಬಿಟ್ಟಿದ್ದರಿಂದ ಮನೆಯಲ್ಲಿದ್ದ ವಿವಿಧ ಅಗತ್ಯ ವಸ್ತು ಹಾಗೂ ಆಹಾರ ವಸ್ತು ಸ್ಥಳಾಂತರಕ್ಕೆ ಅವಕಾಶವೇ ಸಿಗಲಿಲ್ಲ. ಇದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಕೆಪಿಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಜನರಿಗೆ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಪೂರ್ವದಲ್ಲಿ ನೋಟಿಸ್ ನೀಡಲಾಗಿದೆ. ಹಾಗೂ ಧ್ವನಿ ವರ್ಧಕದ ಮೂಲಕ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಲು ಅಧಿಕಾರಿಗಳು ಮುಂದಾದರು. ಇದಕ್ಕೆ ಕೋಪಗೊಂಡ ಸಿದ್ದರಾಮಯ್ಯ ಜನರು ಏಕೆ ಸುಳ್ಳು ಹೇಳುತ್ತಾರೆ. ಪರಿಶೀಲನೆಗೆ ತೆರಳಿದ ಕಡೆಗಳಲ್ಲಿ ಜನರು ಒಂದೇ ರೀತಿಯ ಉತ್ತರ ನೀಡುತ್ತಿದ್ದಾರೆ. ಜನರು ಸುರಕ್ಷತೆ ದೃಷ್ಟಿಯಿಂದ ಕೆಪಿಸಿ ಜಮೀನಿನಲ್ಲೇ ಮನೆ ನಿರ್ಮಾಣ ಮಾಡಿ ಕೊಟ್ಟು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್. ವಿ. ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಸತೀಶ ಸೈಲ್ ಇನ್ನಿತರರು ಇದ್ದರು.

ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement